ಭಾರತದಿಂದ ಟಯರ್ ಡಂಪಿಂಗ್ ತನಿಖೆಗೆ ಅಮೆರಿಕ ನಿರ್ಧಾರ
ವಾಶಿಂಗ್ಟನ್,ಫೆ.20: ಭಾರತ ಹಾಗೂ ಶ್ರೀಲಂಕಾದಿಂದ ಆಮದು ಮಾಡಿಕೊಳ್ಳಲಾದ ನಿರ್ದಿಷ್ಟ ಶ್ರೇಣಿಯ ಟಯರುಗಳ ಬಗ್ಗೆ ಡಂಪಿಂಗ್ ವಿರೋಧಿ ತನಿಖೆಯನ್ನು ನಡೆಸಲು ಅಮೆರಿಕದ ತನಿಖಾ ಸಂಸ್ಥೆಯೊಂದು ಶುಕ್ರವಾರ ನಿರ್ಧರಿಸಿದೆ.ಅಗ್ಗದ ದರದ ಈ ಟಯರುಗಳ ಆಮದಿನಿಂದಾಗಿ, ಸ್ಥಳೀಯ ಉದ್ಯಮದ ಮೇಲೆ ಹಾನಿಕಾರಕ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಅದು ಈ ಕ್ರಮಕ್ಕೆ ಮುಂದಾಗಿದೆ.
ಅಮೆರಿಕದಲ್ಲಿ ನ್ಯಾಯಯುತ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟವಾಗುವ ಹಾಗೂ ಭಾರತ, ಶ್ರೀಲಂಕಾ ಸರಕಾರಗಳಿಂದ ಸಬ್ಸಿಡಿ ಸೌಲಭ್ಯಗಳನ್ನು ಪಡೆದಿರುವ ಕೆಲವು ನಿರ್ದಿಷ್ಟ ಟಯರುಗಳಿಂದಾಗಿ, ಅಮೆರಿಕದ ಟಯರು ಉದ್ಯಮಕ್ಕೆ ಭಾರೀ ಹಾನಿಯಾಗಿದೆಯೆಂಬ ನಿರ್ಣಯದ ಪರವಾಗಿ ಅಮೆರಿಕ ಅಂತಾರಾಷ್ಟ್ರೀಯ ವ್ಯಾಪಾರ ಆಯೋಗ (ಯುಎಸ್‌ಐಟಿಸಿ)ದ ಎಲ್ಲಾ ಆರು ಮಂದಿ ಆಯುಕ್ತರು ಶುಕ್ರವಾರ ಮತ ಚಲಾಯಿಸಿದ್ದಾರೆ.
ಆದರೆ ಇದೇ ಶ್ರೇಣಿಯ ಟಯರುಗಳು ಚೀನಾದಿಂದ ಆಮದಾಗುತ್ತಿದೆಯಾದರೂ, ಅವುಗಳ ಪ್ರಮಾಣವು ತೀರಾ ನಗಣ್ಯವಿರುವುದರಿಂದ ಆ ಬಗ್ಗೆ ತನಿಖೆ ಮುಂದುವರಿಸದಿರಲು ಆಯೋಗವು ನಿರ್ಧರಿಸಿದೆ.ಆದರೆ ಭಾರತ ಹಾಗೂ ಶ್ರೀಲಂಕಾದಿಂದ ಆಮದಾಗುವ ಟಯರ್ ಉತ್ಪನ್ನಗಳ ಬಗ್ಗೆ ತನ್ನ ತನಿಖೆಯನ್ನು ಅಮೆರಿಕದ ವಾಣಿಜ್ಯ ಇಲಾಖೆ ಮುಂದುವರಿಸಲಿದೆ. ಭಾರತದಿಂದ ಆಮೆರಿಕಕ್ಕೆ ಆಮದಾಗುವ ಟಯರ್‌ಗಳ ಬಗ್ಗೆ ತನಿಖೆಯನ್ನು ಆರಂಭಿಸಿರುವುದು ಇದೇ ಮೊದಲ ಸಲವಾಗಿದೆ.





