ಸಾಂಪ್ರದಾಯಿಕ ಕಲೆಯನ್ನು ಗೌರವಿಸಿ

ಮಂಗಳೂರು, ಫೆ.20: ಸಾಂಪ್ರದಾಯಿಕ ಕಲೆಯನ್ನು ಗೌರವಿಸುತ್ತಾ, ಕಲೆಯ ಸೌಂದರ್ಯಕ್ಕೆ ಹಾನಿಯಾಗದ ಹಾಗೆ ಹೊಸತನವನ್ನು ಸೇರಿಸಿಕೊಳ್ಳುತ್ತಾ ಕಲೆಯ ಸಂವಹನ ಕಾಯಕದಲ್ಲಿ ತೊಡಗಿಸಿದಾಗ ಮಾತ್ರ ಕಲಾ ಸೌಂದರ್ಯದಲ್ಲಿ ಶಿವನನ್ನು ಕಾಣಲು ಸಾಧ್ಯ ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ. ಶರಭೇಂದ್ರ ಸ್ವಾಮಿ ನುಡಿದರು. ಕೊಟ್ಟಾರದ ಭರತಾಂಜಲಿ ನೃತ್ಯ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ ‘ನೃತ್ಯಾಮೃತಂ-2016’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಬ್ರಹ್ಮಶ್ರೀ ವಿಠ್ಠಲದಾಸ ತಂತ್ರಿ ಆಶೀರ್ವಚನ ನೀಡಿದರು. ನಾಟ್ಯಾಚಾರ್ಯ ಗುರು ಉಳ್ಳಾಲ ಮೋಹನ ಕುಮಾರ್ ಶುಭ ಹಾರೈಸಿದರು. ಯಕ್ಷಗುರು ಪಣಂಬೂರು ಶ್ರೀಧರ ಐತಾಳರನ್ನು ಸನ್ಮಾನಿಸಲಾಯಿತು. ನಿತ್ಯಾನಂದ ಕಾರಂತ್ ಪೊಳಲಿ ಅಭಿನಂದನಾ ಭಾಷಣ ಮಾಡಿದರು. ವಂದನಾ ರಾಣಿ, ಮಾನಸ ಕಾರಂತ್, ಮಧುರಾ ಕಾರಂತ್‌ರ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
ಭರತಾಂಜಲಿ ನಿರ್ದೇಶಕ ಶ್ರೀಧರ ಹೊಳ್ಳ ಸ್ವಾಗತಿಸಿದರು. ನೃತ್ಯ ನಿರ್ದೇಶಕಿ ಪ್ರತಿಮಾ ಶ್ರೀಧರ್ ವಂದಿಸಿದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.





