ಮಾಲೂರು: ಸರಕಾರಿ ಗೌರವದೊಂದಿಗೆ ಅಧಿಕಾರಿ ಹರೀಶ್ ಅಂತ್ಯಸಂಸ್ಕಾರ

ಮಾಲೂರು, ಫೆ.20: ಕಳೆದ ಗುರುವಾರ ತಮಿಳುನಾಡಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ಐ.ಪಿ.ಎಸ್ ಅಧಿಕಾರಿ, ತಾಲೂಕಿನ ಗೇರುಪುರ ಗ್ರಾಮದ
ಎನ್.ಹರೀಶ್ ಅವರ ಅಂತಿಮ ಸಂಸ್ಕಾರವು ಇಂದು ಸ್ವ ಗ್ರಾಮವಾದ ಗೇರುಪುರದಲ್ಲಿ ನೆರವೇರಿಸಲಾಯಿತು. ಅಧಿಕಾರಿ ಎನ್.ಹರೀಶ್ ಹುಟ್ಟೂರಾದ ಗೇರುಪುರಕ್ಕೆ ಇಂದು ಪಾರ್ಥಿವ ಶರೀರ ತರಲಾಗಿದ್ದು, ಕೆಲಸಮಯ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ತೊರ್ನಹಳ್ಳಿ ಮಾಲೂರು ಮುಖ್ಯರಸ್ತೆಯಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಗಿದ್ದು, ಲಿಂಗಾಯುತ ವೀರಶೈವ ವಿಧಿ ವಿಧಾನದಲ್ಲಿ ಅಂತ್ಯ ಕ್ರಿಯೆಯನ್ನು ನಡೆಸಲಾಯಿತು.
ಈ ವೇಳೆ ತಂದೆ ನಾಗರಾಜಪ್ಪ, ತಾಯಿ ಶಿವಮ್ಮ ಸಹೋದರಿಯರಾದ ಪೂರ್ಣಿಮ, ಆಶಾ ಹಾಗೂ ನೆರೆದಿದ್ದ ಜನತೆಯ ಆಕ್ರಂದನ ಮುಗಿಲುಮುಟ್ಟಿತ್ತು. ಅಂತ್ಯ ಸಂಸ್ಕಾರದಲ್ಲಿ ಬೆಳ್ಳಾನುಪುರ ಮಠದ ಶ್ರೀಮಹಂತಾ ಶಿವಚಾರ್ಯ ಸ್ವಾಮಿ, ಜಿಲ್ಲಾಧಿಕಾರಿ ತ್ರಿಲೋಕ ಚಂದ್ರ, ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಚಕ್ರವರ್ತಿ, ಎಸ್.ಪಿ ದಿವ್ಯ ಗೋಪಿನಾಥ್, ಡಿವೈಎಸ್ಪಿ ಅಬ್ದುಲ್ ಸತ್ತಾರ್, ಎಸ್ಪಿ ಕೊರವಾರ, ಸರ್ಕಲ್ ಇನ್‌ಸ್ಪೆೆಕ್ಟರ್ ರಾಘವೇಂದ್ರನ್, ಸಬ್ ಇನ್‌ಸ್ಪೆೆಕ್ಟರ್ ಎಂ.ಎಲ್.ಚೇತನ್‌ಕುಮಾರ್, ದಯಾನಂದ್, ಮುರುಳಿ, ತಹಶೀಲ್ದಾರ್ ಎಸ್.ನಾಗರಾಜ್, ಜಿಪಂ ಸಿಇಒ ಪನಾಲಿ, ತಾಪಂ ಇಒ ಸಂಜೀವಪ್ಪ, ಆರ್.ಐ ಎಂ.ಬೀರಪ್ಪಮತ್ತಿತರರು ಭಾಗವಹಿಸಿದ್ದರು.





