ಅಫ್ಘಾನಿಸ್ತಾನಕ್ಕೆ ರೋಚಕ ಜಯ

ಏಷ್ಯಾಕಪ್ ಅರ್ಹತಾ ಪಂದ್ಯ
ಫತಾವುಲ್ಲಾ, ಫೆ.20: ನೂರ್ ಅಲಿ ಝದ್ರಾನ್(63 ರನ್, 44 ಎಸೆತ) ಹಾಗೂ ನಜೀಬುಲ್ಲಾ ಝದ್ರಾನ್‌ರ(23 ರನ್, 21) ವೀರೋಚಿತ ಪ್ರದರ್ಶನದ ನೆರವಿನಿಂದ ಅಫ್ಘಾನಿಸ್ತಾನ ತಂಡ ಒಮನ್ ವಿರುದ್ಧದ ಏಷ್ಯಾಕಪ್‌ನ ಅರ್ಹತಾ ಸುತ್ತಿನ ಪಂದ್ಯವನ್ನು 3 ವಿಕೆಟ್‌ಗಳ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಟೂರ್ನಿಯ ಪ್ರಧಾನ ಸುತ್ತಿಗೆ ಅರ್ಹತೆ ಪಡೆಯುವ ವಿಶ್ವಾಸ ಹೆಚ್ಚಿಸಿಕೊಂಡಿದೆ.
ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 166ರನ್ ಗುರಿ ಪಡೆದಿದ್ದ ಅಫ್ಘಾನಿಸ್ತಾನ 19.3 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 168 ರನ್ ಗಳಿಸಿತು. ಎಡಗೈ ಸ್ಪಿನ್ನರ್ ಅಜಯ್ ಲಾಲ್‌ಚೆಟಾ ಎಸೆದ ಅಂತಿಮ ಓವರ್‌ನ ಸತತ ಎರಡು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ ದೌಲತ್ ಝದ್ರಾನ್(ಔಟಾಗದೆ 12, 2 ಎಸೆತ) ಅಫ್ಘಾನಿಸ್ತಾನ ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಲು ನೆರವಾದರು.
ತಲಾ ಮೂರು ವಿಕೆಟ್‌ಗಳನ್ನು ಉರುಳಿಸಿದ ಒಮನ್ ಬೌಲರ್‌ಗಳಾದ ಬಿಲಾಲ್ ಖಾನ್(3-33) ಹಾಗೂ ಮೆಹ್ರಾನ್ ಖಾನ್(3-18) ತಂಡಕ್ಕೆ ಟೂರ್ನಿಯಲ್ಲಿ ಸತತ 2ನೆ ಗೆಲುವು ತಂದುಕೊಡುವ ವಿಶ್ವಾಸ ಮೂಡಿಸಿದ್ದರು. ಆದರೆ, ದೌಲತ್ ಝದ್ರಾನ್ ಅಫ್ಘಾನ್ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.
ಅಫ್ಘಾನ್ ಮೊದಲ ಓವರ್‌ನಲ್ಲೇ ಆರಂಭಿಕ ದಾಂಡಿಗ ಮುಹ್ಮಮದ್ ಶಹಝಾದ್(4) ವಿಕೆಟ್ ಕಳೆದುಕೊಂಡಿತ್ತು. ನಾಯಕ ಸ್ಟಾನಿಕ್‌ಝೈ(34 ರನ್) ಹಾಗೂ ನೂರ್ ಅಲಿ ಝದ್ರಾನ್(63) 2ನೆ ವಿಕೆಟ್‌ಗೆ 54 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು.
ಅಫ್ಘಾನ್‌ಗೆ ಕೊನೆಯ 2 ಓವರ್‌ಗಳಲ್ಲಿ 21 ಅಗತ್ಯವಿತ್ತು. ಸಮೀವುಲ್ಲಾ ಶೆನ್ವಾರಿ ಸತತ ಬೌಂಡರಿ ಬಾರಿಸಿ ತಂಡದ ಒತ್ತಡ ಕಡಿಮೆ ಮಾಡಿದರು. ಅಫ್ಘಾನ್‌ಗೆ ಅಂತಿಮ ಓವರ್‌ನಲ್ಲಿ 10 ರನ್ ಬೇಕಾಗಿತ್ತು. 19.1ನೆ ಓವರ್‌ನಲ್ಲಿ ಶೆನ್ವಾರಿ ಔಟಾದರು. ಆಗ ಸತತ ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ ದೌಲತ್ ಝದ್ರಾನ್ ಅಫ್ಫಾನ್‌ಗೆ ರೋಚಕ ಗೆಲುವು ತಂದುಕೊಟ್ಟರು.
ಒಮನ್ 165/4: ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಒಮನ್ ತಂಡ ಆರಂಭಿಕ ದಾಂಡಿಗ ಝೀಶಾನ್ ಮಕ್ಸೂದ್(52 ರನ್, 42 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಅದ್ನಾನ್ ಇಲಿಯಾಸ್(54 ರನ್, 27 ಎಸೆತ, 3 ಬೌಂಡರಿ, 4 ಸಿಕ್ಸರ್) ಮಹತ್ವದ ಕೊಡುಗೆಯ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 165 ರನ್ ಗಳಿಸಿತು.
ಮಕ್ಸೂದ್ ಹಾಗೂ ಜತೀಂದರ್ ಸಿಂಗ್(23) 10.4 ಓವರ್‌ಗಳಲ್ಲಿ 72 ರನ್ ಜೊತೆಯಾಟ ನಡೆಸಿ ಒಮನ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು.
ಸಂಕ್ಷಿಪ್ತ ಸ್ಕೋರ್
ಒಮನ್: 20 ಓವರ್‌ಗಳಲ್ಲಿ 165/4
(ಅದ್ನಾನ್ ಇಲಿಯಾಸ್ 54, ಝೀಶಾನ್ ಮಕ್ಸೂದ್ 52, ಜತೀಂದರ್ 23, ಗುಲ್ಬ್ಬುದ್ದೀನ್ ನೈಬ್ 2-24)
ಅಫ್ಘಾನಿಸ್ತಾನ: 19.3 ಓವರ್‌ಗಳಲ್ಲಿ 168/7
(ನೂರ್ ಅಲಿ ಝದ್ರಾನ್ 63, ಅಸ್ಘರ್ ಸ್ಟಾನಿಕ್‌ಝೈ 34, ಬಿಲಾಲ್ ಖಾನ್ 3-33, ಮೆಹ್ರಾನ್ ಖಾನ್ 3-18)
ಇಂದಿನ ಪಂದ್ಯಗಳು
ಅಫ್ಘಾನಿಸ್ತಾನ-ಹಾಂಕಾಂಗ್
ಸ್ಥಳ: ಢಾಕಾ
ಸಮಯ: ಮಧ್ಯಾಹ್ನ 3:00
ಒಮನ್-ಯುಎಇ
ಸ್ಥಳ: ಢಾಕಾ
ಸಮಯ: ರಾತ್ರಿ 7:30







