ನೀರ್ಜಾ: ಸಣ್ಣ ವಯಸ್ಸು, ದೊಡ್ಡ ಬದುಕು....

‘ನಾನು ದೊಡ್ಡ ಬದುಕನ್ನು ಬದುಕಲಿಚ್ಛಿಸುತ್ತೇನೆಯೇ ಹೊರತು ದೀರ್ಘ ಬದುಕನ್ನಲ್ಲ’’ ಬದುಕು ಶ್ರೇಷ್ಠವೆನಿಸಬೇಕಾದರೆ, ದೀರ್ಘವಾಗಿ ಬದುಕಬೇಕೆಂದೇನೂ ಇಲ್ಲ. ಆನಂದ್ ಚಿತ್ರದಲ್ಲಿ ರಾಜೇಶ್ ಖನ್ನಾ ಹೇಳುವ ಮಾತಿದು. ಅಂತೆಯೇ ನೀರ್ಜಾ ಭಾನೊಟ್ ಅವರಿಗೆ ದೊಡ್ಡದೊಂದು ಬದುಕನ್ನು ಬದುಕುವ ಆಸೆ. ಒಂದು ವಿಮಾನ ಪಯಣದಲ್ಲಿ ಆ ಆಸೆ ಈಡೇರುತ್ತದೆ. 1986ರಲ್ಲಿ ಲಿಬಿಯನ್ ಉಗ್ರಗಾಮಿಗಳಿಂದ ಅಪಹರಿಸಲ್ಪಟ್ಟ ವಿಮಾನದಲ್ಲಿ 300ಕ್ಕೂ ಅಧಿಕವಿರುವ ಪ್ರಯಾಣಿಕರಿಗಾಗಿ ಪ್ರಾಣ ಅರ್ಪಿಸುವ ಮೂಲಕ ದೇಶಭಕ್ತಿಯೆಂದರೆ ಏನು, ಶ್ರೇಷ್ಠವಾಗಿ ಬದುಕುವುದು ಎಂದರೆ ಏನು ಎನ್ನುವುದನ್ನು ಆಕೆ ತಿಳಿಸಿಕೊಡುತ್ತಾಳೆ. ಒಬ್ಬ ಗಗನ ಸಖಿಯ ಆತ್ಮಕತೆಯನ್ನು ಆಧಾರವಾಗಿಟ್ಟುಕೊಂಡು ಮಾಡಿರುವ ಸಿನೆಮಾ ‘ನೀರ್ಜಾ’. ಆದರೆ ಎಲ್ಲೂ ಸಾಕ್ಷಚಿತ್ರವಾಗುವುದಕ್ಕೆ ಅವಕಾಶ ಕೊಡದೆ, ರಕ್ತ ಮಾಂಸ ತುಂಬಿದ ಸಿನೆಮಾವಾಗಿ ಕಟ್ಟಿಕೊಡುತ್ತಾರೆ ನಿರ್ದೇಶಕ ರಾಮ್ ಮಧ್ವಾನಿ. ಇಲ್ಲಿ ವಾಸ್ತವ ಮತ್ತು ಸಿನೆಮಾದ ರೋಚಕತೆಯನ್ನು ಹದವಾಗಿ ಮಿಶ್ರಗೊಳಿಸಿದ್ದಾರೆ ನಿರ್ದೇಶಕರು. ಸೋನಮ್ ಅವರು ಗ್ಲಾಮರ್ ಮೂಲಕವೂ ಅಭಿನಯದ ಮೂಲಕವೂ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ. ಅವರ ನಾಯಕಿ ಪಾತ್ರಕ್ಕೆ ಪೂರಕವಾಗಿ ಶಬನಾ ಅಜ್ಮಿ, ಯೋಗೇಂದ್ರ ಟಿಕು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಆತ್ಮಕತೆಯನ್ನು ಎಲ್ಲೂ ಸೊರಗದಂತೆ ಸಿನೆಮಾ ಆಗಿ ಕಟ್ಟಿಕೊಡಲು ಅತಿದೊಡ್ಡ ಸಹಾಯ ಮಾಡಿರುವುದು ಚಿತ್ರಕತೆ. ಭಾವನಾತ್ಮಕವಾದ ದೃಶ್ಯಗಳನ್ನು ಅಳವಡಿಸುವ ಸಂದರ್ಭದಲ್ಲಿ ನಿರ್ದೇಶಕರು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿದ್ದಾರೆ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.
ಒಂದು ತಂಡದ ಪ್ರಾಮಾಣಿಕ ಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತದೆ. ಯುವಕರಿಗೆ ಸ್ಫೂರ್ತಿಯನ್ನು ಆದರ್ಶವನ್ನು ತುಂಬುವ ದೊಡ್ಡದೊಂದು ಕೆಲಸವನ್ನು ನೀರ್ಜಾ ಮಾಡುತ್ತಾಳೆ. ಅವಳ ಕನಸನ್ನು ನಮ್ಮದಾಗಿಸುವ ಸಲುವಾಗಿ ಈ ಚಿತ್ರವನ್ನು ಒಂದು ಬಾರಿ ನೋಡಬಹುದು.





