ಪ್ರಶಸ್ತಿ ವಾಪಸು: ಇದೀಗ ಮಹಾರಾಷ್ಟ್ರ ರೈತರ ಸರದಿ

ಮುಂಬೈ: ಬರಪೀಡಿತ ಪ್ರದೇಶಗಳ ಬಗ್ಗೆ ಮಹಾರಾಷ್ಟ್ರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಹಾಗೂ ರೈತರ ಆತ್ಮಹತ್ಯೆ ತಡೆಗೆ ವಿಫಲವಾಗಿರುವುದರ ವಿರುದ್ಧ, ತಮಗೆ ಸರ್ಕಾರ ನೀಡಿರುವ ಪ್ರಶಸ್ತಿಗಳನ್ನು ವಾಪಾಸು ಮಾಡಲು ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ರೈತರು ನಿರ್ಧರಿಸಿದ್ದಾರೆ. ಜಲ್ನಾದ ವಳಸಂಗಿಯ 78 ವರ್ಷದ ನಾರಾಯಣ ಖಾಡಕೆ ತಮ್ಮ ಶೇಠಿ ನಿಷ್ಟ ಪ್ರಶಸ್ತಿಯನ್ನು ಮರಳಿಸಿದ್ದಾರೆ. ಉತ್ತಮ ಕೃಷಿ ವಿಧಾನ ಅಳವಡಿಸಿಕೊಂಡಿದ್ದಕ್ಕಾಗಿ 1983ರಲ್ಲಿ ಈ ಪ್ರಶಸ್ತಿ ನೀಡಲಾಗಿತ್ತು.
ಮತ್ತೊಬ್ಬ ರೈತ ಲಾತೂರ್ ಜಿಲ್ಲೆಯ ಕಾರ್ಲ ಗ್ರಾಮದ ವಿಠಲರಾವ್ ಕಾಳೆ, ತಮ್ಮ ಪ್ರಶಸ್ತಿಯನ್ನು ವಾಪಾಸು ಮಾಡಿರುವುದಷ್ಟೇ ಅಲ್ಲದೇ, ಅದರ ಜತೆ ಬಂದಿರುವ 10 ಸಾವಿರ ರೂಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ವಾಪಾಸು ಮಾಡಿದ್ದಾರೆ. 2001ರಲ್ಲಿ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು.
ಖಾಡ್ಕೆ ಹೇಳುವಂತೆ, "ಹಲವು ಯೋಜನೆಗಳನ್ನು ಘೋಷಿಸಲಾಗುತ್ತಿದೆ. ಆದರೆ ಅದರ ಪ್ರಯೋಜನ ನಮಗೆ ತಲುಪುತ್ತಿಲ್ಲ. ಸರ್ಕಾರ ನಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತದೆ. ಆದರೆ ಸಾಲದ ಸುಳಿಯಲ್ಲಿ ಸಿಲುಕಿರುವ ಬಡವರ ಸಮಸ್ಯೆಗಳನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ಇದರಿಂದ ನಾನು ಪ್ರಶಸ್ತಿ ಮರಳಿಸಿದ್ದೇನೆ"





