ಶಿಕ್ಷಣ-ವೈದ್ಯಕೀಯ ಕ್ಷೇತ್ರದಲ್ಲೂ ಮಾನವೀಯ ವೌಲ್ಯಗಳ ಕುಸಿತ: ನ್ಯಾ.ಎನ್.ಸಂತೋಷ್ ಹೆಗ್ಡೆ

ಬೆಂಗಳೂರು, ಫೆ.21: ಸಮಾಜಕ್ಕೆ ಮಾರ್ಗದರ್ಶನ, ಆರೋಗ್ಯವನ್ನು ಒದಗಿಸುವಂತಹ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದಲ್ಲೂ ಮಾನವೀಯ ವೌಲ್ಯಗಳು ಕುಸಿಯುತ್ತಿರುವುದು ವಿಷಾದನೀಯ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಐಟಿಐ ವಿದ್ಯಾಮಂದಿರ ಶಾಲೆಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕರಾವಳಿ ಜನಕೂಟದ 10ನೆ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಗಳು ಹಣ ಮಾಡುವುದನ್ನೆ ಕಾಯಕವನ್ನಾಗಿ ಮಾಡಿಕೊಂಡಿವೆ. ಇದರಿಂದಾಗಿ, ಸೇವಾ ಮನೋಭಾವನೆ ಇರಬೇಕಾದ ಸ್ಥಳವನ್ನು ದುರಾಸೆ ಆಕ್ರಮಿಸಿಕೊಂಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಡು ಬಡವರು, ಅಶಕ್ತರಿಗೆ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಆರಂಭಿಸಲಾಗಿರುವ ಸರಕಾರಿ ಆಸ್ಪತ್ರೆಗಳಲ್ಲೆ ಬಡವರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಸರಕಾರಗಳು ಸರಕಾರಿ ಆಸ್ಪತ್ರೆಗಳಿಗಾಗಿ ಕೋಟ್ಯಂತರ ರೂ. ಅನುದಾನವನ್ನು ಖರ್ಚು ಮಾಡಿದರೂ ಅರ್ಹರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದಿಲ್ಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಇತ್ತೀಚೆಗೆ ದೇಶದ್ರೋಹಿ ಘೋಷಣೆಗಳು ಮೊಳಗಿರುವ ಘಟನೆ ನಡೆದಿದೆ. ಈ ವಿಚಾರದ ಬಗ್ಗೆ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿವೆ. ದೇಶದ್ರೋಹ ಘೋಷಣೆ ಯಾರೇ ಮಾಡಿದ್ದರೂ ಅದು ಖಂಡನಾರ್ಹ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್, ಯಕ್ಷಗಾನ ಕಲಾವಿದ ಶಿವಕುಮಾರ್ ಬೇಗಾರ್, ಕರಾವಳಿ ಜನಕೂಟದ ಅಧ್ಯಕ್ಷ ಜಯಸಾಲಿಯಾನ್, ಪ್ರಧಾನಕಾರ್ಯದರ್ಶಿ ಅಶೋಕ್, ಗೌರವಾಧ್ಯಕ್ಷ ದಿವಾಕರ್, ಕಾರ್ಯದರ್ಶಿ ಪ್ರಜ್ಞಾಶೆಟ್ಟಿ, ರಾಜೇಶ್ವರಿ ಹರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





