ಸಾಹಿತ್ಯದಿಂದ ಜಾತಿ-ಧರ್ಮಗಳ ನಡುವಿನ ಅಸಮಾನತೆ ನಿರ್ಮೂಲನೆ: ಕಾಯ್ಕಿಣಿ
ಎಸ್.ಪಿ.ವರದರಾಜು ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು, ಫೆ. 21: ಕನ್ನಡ ಭಾಷೆಯನ್ನು ಮನೆ-ಮನಗಳಲ್ಲಿ ಉಳಿಸುವ ಪ್ರಯತ್ನ ಆಗಬೇಕು. ಜಾತಿ, ಧರ್ಮ, ಪಂಥಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸಲು ಕಲೆ, ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಲೇಖಕ ಜಯಂತ ಕಾಯ್ಕಿಣಿ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಯುವನಿಕಾ ಸಭಾಂಗಣದಲ್ಲಿ ಆಯೋಜಿಸಿದ್ದ ಎಸ್.ಪಿ.ವರದರಾಜು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜಕಾರಣದಿಂದ ಮನುಷ್ಯರ ನಡುವೆ ಜಾತಿ, ಧರ್ಮ, ಪಂಥಗಳ ಗೋಡೆ ಉದ್ಭವಿಸುತ್ತಿರುವುದು ಆತಂಕ ಸೃಷ್ಟಿಸಿದೆ. ಸಮಾಜದಲ್ಲಿ ಉತ್ತಮ ವಾತವರಣ ನಿರ್ಮಾಣ ಆಗಬೇಕಾದರೆ ಉತ್ತಮ ಸಾಮಾಜಿಕ ಮೌಲ್ಯಗಳು ಅವಶ್ಯ ಎಂದು ಪ್ರತಿಪಾದಿಸಿದರು.
ರಂಗಭೂಮಿ ಕಲಾವಿದೆ ಕೊಟ್ಟೂರು ಕೋಮಲಮ್ಮ ಹಾಗೂ ಕಲಾವಿದ ಡಿಂಗ್ರಿ ನಾಗರಾಜ್ ಅವರಿಗೆ ವರದರಾಜು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ, ವರದರಾಜ್ ಅವರು ಎಲೆ ಮರೆಯ ಕಾಯಿಯಂತೆ ಇದ್ದು ನಾಡಿಗೆ ರಾಜ್‌ಕುಮಾರ್ ಅಂತಹ ಶ್ರೇಷ್ಠ ನಟರನ್ನು ನೀಡಿದ ದೊಡ್ಡ ದಾನಿ ಎಂದು ಬಣ್ಣಿಸಿದರು.
ನಟ ಸಾರ್ವಭೌಮ ದಿ.ಡಾ.ರಾಜ್‌ಕುಮಾರ್ ಅವರ ಬದುಕಿಗೆ ಸ್ಫೂರ್ತಿಯ ಕಾರಂಜಿಯಾಗಿ ನಿಂತಿದ್ದು ವರದರಾಜು. ಯಾವುದೇ ಪ್ರಚಾರವನ್ನು ಬಯಸದ ಶ್ರೇಷ್ಟ ಹಾಗೂ ವಿನಯಶೀಲ ವ್ಯಕ್ತಿಯಾದ ವರದಪ್ಪಹಾಗೂ ಡಾ.ರಾಜ್ ರಾಮ- ಲಕ್ಷ್ಮಣರಿದ್ದಂತೆ. ಇವರು ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಚಿತ್ರಗಳನ್ನು ನೀಡಿದ ಸೋದರರ ಜೋಡಿ ಎಂದು ಶ್ಲಾಘಿಸಿದರು.
ರಾಜ್‌ಕುಮಾರ್ ಅವರು ರಾಜಕೀಯದಲ್ಲಿ ಪ್ರವೇಶ ಮಾಡಿ ಆ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಮೂಡಿಸಬಹುದಿತ್ತು. ಆದರೆ, ರಾಜಕೀಯ ಚಟುವಟಿಕೆಗಳಲ್ಲಿ ಉತ್ಸಾಹ ತೋರದ ಶ್ರೇಷ್ಠ ವ್ಯಕ್ತಿ, ಮಹಾನ್ ನಟ. ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ಕನ್ನಡಾಭಿಮಾನಿ ಅವರಾಗಿದ್ದರು. ರಾಜ್ಯಸಭಾ ಸದಸ್ಯರಾಗುವ ಅವಕಾಶ ಬಂದರೂ ಅದನ್ನು ತಿರಸ್ಕರಿಸಿದ್ದರು ಎಂದು ಮೊಯ್ಲಿ ಉಲ್ಲೇಖಿಸಿದರು. ಕೀರ್ತಿ, ಪ್ರತಿಷ್ಟೆ, ಕಾಮನೆಯ ಹಿಂದೆ ಹೋದವರಲ್ಲ ರಾಜ್, ಅವರ ನಗುಮುಖದ ವ್ಯಕ್ತಿತ್ವ, ವಿನಯಶೀಲ ಗುಣ-ನಡತೆ ಅವರ ಮಕ್ಕಳಲ್ಲೂ ಬಂದಿದೆ. ಇಂತಹ ಮಹಾನ್ ಕಲಾವಿದ ಬೇರೆ ಭಾಷೆಯ ಚಲನಚಿತ್ರರಂಗಗಳಿಗೆ ಹೋಗಿದ್ದರೆ ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ನಾಡಿಗೆ ಇಂತಹ ಅದ್ಭುತವಾದ ನಟ ದೊರೆಯುತ್ತಿರಲಿಲ್ಲ ಎಂದು ಹೇಳಿದರು.
‘ಯುನೆಸ್ಕೊ’ ಫೆ.22 ಅನ್ನು ‘ತಾಯ್ನಡಿ ದಿನಾಚರಣೆ’ ದಿನ ಎಂದು ಘೋಷಿಸಿದೆ. ಆದರೆ ಇಂದಿನ ದಿನಗಳಲ್ಲಿ ಕೆಲವರಲ್ಲಿ ತಾಯ್ನಡಿ ಬಗ್ಗೆ ಹಲವಾರು ರೀತಿಯಲ್ಲಿ ಕೀಳರಿಮೆಗಳಿವೆ ಇದು ತಾಯಿಯನ್ನು ಅಲ್ಲಗಳೆದಂತೆ. ಕೇವಲ ಆಂಗ್ಲಭಾಷೆ ಮಾತ್ರ ಜ್ಞಾನ ನೀಡುವ ಭಾಷೆ ಎನ್ನುವಂತಹ ಮನೋಭಾವನೆ ಜನರಲ್ಲಿದೆ.
ಇದು ಸಾಕ್ಷರತೆಯಲ್ಲಿ ಅನಕ್ಷರತೆ ವಿಚಾರ ಮೂಡಿಬಂದತಾಗುತ್ತದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತು ನಾಲ್ಕು ವರ್ಷಗಳು ಕಳೆದರೂ ಯಾವುದೇ ಪ್ರಯೋಜನ ಕನ್ನಡಕ್ಕೆ ತರಲು ಸಾಧ್ಯ ವಾಗುತ್ತಿಲ್ಲ. ಈ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷ್ಯ ತೋರಿಸುತ್ತಿವೆ ಎಂದು ವೀರಪ್ಪ ಮೊಯ್ಲಿ ಕಿಡಿಕಾರಿದರು.
ಸಮಾರಂಭದಲ್ಲಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ, ಖ್ಯಾತನಟ ಡಾ.ಶಿವರಾಜ್ ಕುಮಾರ್, ನಟಿ ಶ್ರುತಿ ಸೇರಿದಂತೆ ಇನ್ನಿತರರು ಹಾಜರಿದ್ದರು.







