ಎಂ.ಜಿ.ರಸ್ತೆಯಲ್ಲಿಂದು ಗ್ರಾಮ್ಯಸೊಗಡಿನ ಸಂಭ್ರಮ
‘ಮುಕ್ತ ಹಾದಿ’ ಕಾರ್ಯಕ್ರಮ

ಆರ್.ಸಮೀರ್ ದಳಸನೂರು
ಬೆಂಗಳೂರು, ಫೆ.21: ಪ್ರತಿನಿತ್ಯ ಜನಜಂಗುಳಿ, ಓಡುವ ವಾಹನಗಳಿಂದ ಸದಾ ಗಿಜಿಗುಡುತ್ತಿದ್ದ ಮಹಾತ್ಮ ಗಾಂಧಿ (ಎಂ.ಜಿ.ರಸ್ತೆ) ರಸ್ತೆ ದೇಶಿಯ ಆಟಗಳ ಕಲರವ, ಜಾನಪದ ನೃತ್ಯ, ಕಲೆ, ಸಂಸ್ಕೃತಿ ಗಳ ಸಂಗಮ ಹಾಗೂ ಹಳ್ಳಿಗಾಡಿನ ಜಾನಪದ ಜಾತ್ರೆಯ ಸೊಗಡಿನ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.
ಎಲ್ಲಿನ ಹಳ್ಳಿ..ಮತ್ತೇಲ್ಲಿನ ಮಹಾತ್ಮ ಗಾಂಧಿ ರಸ್ತೆಯೆಂಬ ಸಹಜ ಪ್ರಶ್ನೆಗೆ ಪ್ರವಾಸೋದ್ಯಮ, ಬಿಡಿಎ, ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ‘ಮುಕ್ತ ಹಾದಿ’ ಕಾರ್ಯಕ್ರಮ ಉತ್ತರವೇ ಆಗಿತ್ತು. ಎಂ.ಜಿ.ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಿದ್ದ ಹಿನ್ನೆಲೆಯಲ್ಲಿ ಮಕ್ಕಳು, ವೃದ್ಧರು, ಯುವಕ-ಯುವತಿಯರು ‘ಮುಕ್ತ ಹಾದಿ’ ಸಂಭ್ರಮದಲ್ಲಿ ಮಿಂದೆದ್ದರು.
ದೇಶಿ ಆಟಗಳ ಮೋಜು-ಮಸ್ತಿ: ಹಳ್ಳಿಗಾಡಿನ ಕಬಡ್ಡಿ, ಕುಂಟಾಬಿಲ್ಲೆ, ಲಗೋರಿ, ಚೌಕಾಬಾರಾ, ರಿಂಗಿನ ಆಟ, ಸೈಕಲ್ ಟೈಯರ್ ಓಡಿಸುವುದು, ಕಬಡ್ಡಿ, ಚಿತ್ರಕಲೆ ಸೇರಿದಂತೆ ಇತರೆ ಆಟಗಳನ್ನು ಆಡುವುದರಲ್ಲಿ ಮಕ್ಕಳು, ಯುವಕ-ಯುವತಿಯರು ಮಗ್ನರಾಗಿದ್ದರು. ಇಂತಹ ಅವಕಾಶ ಮತ್ತೆ ಯಾವಾಗ ಬರುತ್ತೋ ಗೊತ್ತಿಲ್ಲ... ಸಮಯ ಹಾಳು ಮಾಡುವುದ್ಯಾಕೆ ಎಂದು ಎಲ್ಲರೂ ಆಟಗಳನ್ನು ಆಡಿ ಕುಣಿದು ಕುಪ್ಪಳಿಸಿದರು.
ಜಾನಪದ ಕುಣಿತ: ಉತ್ತರ ಕರ್ನಾಟಕದ ಹಿರಿಯ ಮತ್ತು ಯುವ ಜನಪದ ಡೊಳ್ಳು ಕುಣಿತ ಕಲಾವಿದರು ಎಂ.ಜಿ.ರಸ್ತೆಯ ಪ್ರವಾಸಿಗರಿಗೆ ಮನರಂಜನೆ ನೀಡಿದರು. ಕಲಾವಿದರ ಡೊಳ್ಳಿನ ಲಯಕ್ಕೆ ವಿದೇಶಿಯರು ಸೇರಿದಂತೆ ನೆರೆದಿದ್ದ ಹಲವರು ಲಜ್ಜೆಬಿಟ್ಟು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಅದೇ ರೀತಿ, ಕರಾವಳಿ ಭಾಗದ ಯಕ್ಷಗಾನ ಕಲಾವಿದರಿಂದ ವಿಶೇಷ ನೃತ್ಯದ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ನಗರದ ಸಂಚಾರ ದಟ್ಟಣೆ ನಿಯಂತ್ರಣ ದೃಷ್ಟಿ ಯಿಂದ ಸಾರ್ವಜನಿಕ ಸಾರಿಗೆಯನ್ನು ಬಳಸುವ ಸಂಬಂಧ ಜಾಗೃತಿ ಹಾಗೂ ನಗರದ ರಸ್ತೆಗಳಲ್ಲಿ ನೈರ್ಮಲ್ಯ ಕಾಪಾಡಲು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಏರ್ಪಡಿಸಿದ್ದ ಮುಕ್ತ ಹಾದಿ ಕಾರ್ಯಕ್ರಮದಲ್ಲಿ ಮಕ್ಕಳು ಸೈಕಲ್ ಸವಾರಿ ಮಾಡಿದರು. ಅಲ್ಲದೆ, ಸ್ಕೇಟಿಂಗ್ ನಡೆಸಿ ಸಂತೋಷಪಟ್ಟರು.
ವಿದೇಶಿಯರು ಫುಲ್ ಖುಷ್: ಎಂ.ಜಿ.ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿರುವುದು ವಿದೇಶಿಯ ರಿಗೆ ಸಂತೋಷ ತಂದಿದ್ದು, ಮುಕ್ತಹಾದಿ ಕಾರ್ಯ ಕ್ರಮವನ್ನು ಬೆಂಬಲಿಸಿದರು. ಅಲ್ಲದೆ, ಹಳ್ಳಿಗಾಡಿನ ಕಲೆ-ಸಂಸ್ಕೃತಿಯನ್ನು ನೋಡಿ ಖುಷಿಪಟ್ಟರು. ಅಮೆರಿಕಾ, ಫ್ರಾನ್ಸ್, ಜರ್ಮನಿ ಸೇರಿದಂತೆ ಇತರೆ ದೇಶದ ಪ್ರವಾಸಿಗಳು ಎಂ.ಜಿ. ರಸ್ತೆಯಲ್ಲಿದ್ದರು.
ಗೊಂಬೆಗಳಿಗೆ ಬೇಡಿಕೆ: ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಗೊಂಬೆಗಳ ಮಧ್ಯೆಯೂ ಚನ್ನಪಟ್ಟಣದ ಅಪರೂಪದ ಮರದ ಗೊಂಬೆಗಳಿಗೆ ಎಲ್ಲಿಲ್ಲದ ಬೇಡಿಕೆ ಕಂಡು ಬಂತು. ವಿದೇಶಿಯರು ಸೇರಿದಂತೆ ಮಕ್ಕಳು, ಪ್ರವಾಸಿಗರು ಮುಗಿಬಿದ್ದು ಗೊಂಬೆಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. 300ಕ್ಕೂ ಹೆಚ್ಚು ಮಳಿಗೆಗಳು: ಪುಸ್ತಕ, ತಿಂಡಿ-ತಿನಿಸು, ಖಾದಿ ಬಟ್ಟೆ, ಸೊಪ್ಪು, ಹಣ್ಣು, ತರಕಾರಿ ಸೇರಿದಂತೆ ವಸ್ತು ಪ್ರದರ್ಶನ ಹಾಗೂ ಮಾರಾಟಕ್ಕಾಗಿಯೇ 300ಕ್ಕೂ ಹೆಚ್ಚು ಮಳಿಗೆಗಳನ್ನು ಎಂ.ಜಿ.ರಸ್ತೆಯಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿತ್ತು. ವ್ಯಾಪಾರದ ಭರಾಟೆ ಜೋರಾಗಿಯೇ ಇತ್ತು.
ಕನ್ನಡ ಪದಗಳನ್ನು ಕಲಿಸಿಕೊಟ್ಟರು..!: ಹೊರ ರಾಜ್ಯದವರಿಗೆ ಕನ್ನಡ ಕಲಿಸುವ ಹಂಬಲದಿಂದ ಮಂಗಳೂರು ಮೂಲದ ಅನೂಪ್‌ಮಯ್ಯ ತಂಡ ‘ಕನ್ನಡ ಕಲಿಕೆ’ ವಿಶೇಷ ಕಾರ್ಯಕ್ರಮ ‘ಮುಕ್ತಹಾದಿ’ ಅನ್ಯ ಭಾಷಿಕರು ಸೇರಿದಂತೆ ವಿದೇಶಿಯರನ್ನೂ ಸೆಳೆಯಿತು.
ಈ ವೇಳೆ ಮಾತನಾಡಿದ ಅನೂಪ್‌ಮಯ್ಯ ತಂಡದ ಸದಸ್ಯ ಲಕ್ಷ್ಮಣ್, ಆರು ಗಂಟೆಗಳ ಕಾಲಾವಧಿಯಲ್ಲಿ ಐದು ಸಾವಿರಕ್ಕೂ ಅನ್ಯಭಾಷಿಕರಿಗೆ ವ್ಯವಹಾರದ ದೃಷ್ಟಿಯಿಂದ ಅನುಕೂಲವಾಗುವಂತೆ ಸರಳವಾಗಿ ಕನ್ನಡ ಭಾಷೆಯ ಕೆಲ ಪದಗಳನ್ನು ಹೇಳಿಕೊಟ್ಟಿದ್ದೇವೆ. ಕನ್ನಡ ಭಾಷೆ ಪೂರ್ಣ ಪ್ರಮಾಣದಲ್ಲಿ ಕಲಿಯಲು ಕನ್ನಡ ತರಬೇತಿ ಶಾಲೆಗೆ ಸೇರ್ಪಡೆಗೊಳ್ಳಲು ಮಾಹಿತಿ ನೀಡಲಾಗಿದೆ ಎಂದರು.
ಇನ್ನಷ್ಟು ರಸ್ತೆಗಳಲ್ಲಿ ‘ಮುಕ್ತಹಾದಿ’ ಕಾರ್ಯಕ್ರಮ: ಸಚಿವ ಆರ್.ವಿ.ದೇಶಪಾಂಡೆ
ಬೆಂಗಳೂರು, ಫೆ. 21: ಉದ್ಯಾನನಗರಿ, ಸಿಲಿಕಾನ್ ಸಿಟಿ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ನಗರದಲ್ಲಿನ ಇನ್ನಷ್ಟು ರಸ್ತೆಗಳಲ್ಲಿ ‘ಮುಕ್ತ ಹಾದಿ’ (ಓಪನ್ ಸ್ಟ್ರೀಟ್) ಕಾರ್ಯಕ್ರಮಗಳನ್ನು ರೂಪಿಸಲು ಕ್ರಮ ಕೈಗೊಳ್ಳುವುದು ಎಂದು ಪ್ರವಾಸೋದ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಇಂದಿಲ್ಲಿ ಭರವಸೆ ನೀಡಿದ್ದಾರೆ.
ರವಿವಾರ ನಗರದ ಮಹಾತ್ಮಗಾಂಧಿ(ಎಂ.ಜಿ) ರಸ್ತೆಯಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯ, ಬಿಎಂಟಿಸಿ, ಪೊಲೀಸ್ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ‘ಎಂ.ಜಿ.ರಸ್ತೆಯಲ್ಲಿ ಮುಕ್ತಹಾದಿ’ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದೇಶಗಳಲ್ಲಿ ಓಪನ್ ಸ್ಟ್ರೀಟ್ ಕಾರ್ಯಕ್ರಮಗಳು ಸಾಮಾನ್ಯವಾಗಿ ನಡೆಯುತ್ತವೆ. ಆದರೆ, ಭಾರತದ ಪ್ರಮುಖ ನಗರಗಳಲ್ಲಿ ಇಂತಹ ಕಾರ್ಯಕ್ರಮ ಜರಗಿಸುವುದು ಒಂದು ದೊಡ್ಡ ಸವಾಲು ಎಂದ ಅವರು, ಬೆಂಗಳೂರಿನ ಪ್ರವಾಸಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಹಾಗೂ ಅಭಿವೃದ್ಧಿಪಡಿಸುವ ಹಿನ್ನಲೆಯಲ್ಲಿ ಮುಕ್ತ ಹಾದಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಅಧಿಕವಾಗಿದೆ. ಇಂತಹ ಸಮಯದಲ್ಲಿ ಮುಕ್ತಹಾದಿ ಕಾರ್ಯಕ್ರಮ ಏರ್ಪಡುಗೊಳಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ನಗರವಾಸಿಗಳು ಪಾಲ್ಗೊಂಡು ಪ್ರೋತ್ಸಾಹ ನೀಡಬೇಕಾಗಿದೆ. ಅಲ್ಲದೆ, ಶೀಘ್ರದಲ್ಲಿಯೇ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಅವೆನ್ಯೂ ರಸ್ತೆ ಯಲ್ಲೂ ಈ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಸಾರ್ವಜನಿಕರಿಂದ ಮುಕ್ತ ಹಾದಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಮಹಾತ್ಮ ಗಾಂಧಿ ರಸ್ತೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ನಗರದಾದ್ಯಂತ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು.







