ರಾಜಕೀಯ ಕಾರಣಕ್ಕಾಗಿ ವೌಢ್ಯ ಪ್ರತಿಬಂಧಕ ಕಾಯ್ದೆಗೆ ತಡೆ: ಪಂಡಿತಾರಾಧ್ಯ ಸ್ವಾಮೀಜಿ
ಬೆಂಗಳೂರು, ಫೆ. 21: ವೌಢ್ಯ ಪ್ರತಿಬಂಧಕ ಕಾಯ್ದೆ ಜಾರಿ ಮಾಡಿದರೆ ಕಾಂಗ್ರೆಸ್ ಸರಕಾರಕ್ಕೆ ತೊಂದರೆಯಾಗಲಿದೆ ಎಂಬ ರಾಜಕೀಯ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಯ್ದೆಯನ್ನು ಜಾರಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಾಣೇಮಠದ ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.
ರವಿವಾರ ಕರ್ನಾಟಕ ರಂಗಜಾಗೃತಿ ಪರಿಷತ್ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ರಂಗಭಂಡಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಂವಾದ ನಡೆಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ವೈಯಕ್ತಿಕವಾಗಿ ವೌಢ್ಯ ಪ್ರತಿಬಂಧಕ ಕಾಯ್ದೆ ಜಾರಿ ಮಾಡುವ ಉದ್ದೇಶವಿದೆ. ಆದರೆ, ಸರಕಾರಕ್ಕೆ ಸಮಸ್ಯೆಯಾಗಲಿದೆ ಎಂಬ ಕಾರಣಕ್ಕಾಗಿಯೆ ಮನಸು ಮಾಡುತ್ತಿಲ್ಲ ಎಂದು ತಿಳಿಸಿದರು.
ಧರ್ಮಗಳು ಸಕಲ ಜೀವಿಗಳಿಗೂ ಒಳಿತನ್ನು ಬಯಸುವ ಹಾಗೂ ಜ್ಯಾತ್ಯತೀತ ಮನೋಭಾವವನ್ನು ಬೆಳೆಸುವ ರೀತಿಯಲ್ಲಿರಬೇಕು. ಇದರ ಹೊರತು ಪಾರಂಪರಿಕವಾಗಿ ಚಾಲ್ತಿಯಲ್ಲಿರುವ, ವೌಢ್ಯಚಾರಣೆಗೆ ಬೆಂಬಲಿಸುವಂತಹ ಧರ್ಮಗಳನ್ನು ಮಠಾಧೀಶರು ಸೇರಿದಂತೆ ಪ್ರತಿಯೊಬ್ಬರು ವಿರೋಧಿಸಬೇಕೆಂದು ಅವರು ತಿಳಿಸಿದರು.
ಶಾಲಾ ಹಂತದ ವಿದ್ಯಾರ್ಥಿಗಳಿಂದಲೆ ರಂಗ ಚಟುವಟಿಕೆ ಗಳಿಗೆ ಪ್ರೋತ್ಸಾಹ ನೀಡಬೇಕು. ಹೀಗಾಗಿ ಪಠ್ಯದಲ್ಲಿ ರಂಗ ಶಿಕ್ಷಣವನ್ನು ಕಡ್ಡಾಯಗೊಳಿಸಲು ಸರಕಾರ ಮುಂದಾಗಬೇಕು. ಇದರಿಂದ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದರು.
ತರಳುಬಾಳು ಮಠವು ಕಳೆದ 19ವರ್ಷಗಳಿಂದ ರಂಗ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಕೇವಲ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶವೆ ನಮ್ಮ ರಂಗಭೂಮಿಯ ಮುಖ್ಯ ಉದ್ದೇಶವಾಗಿದೆ. ಇಂತಹ ನಾಟಕಗಳಿಂದ ಅನೇಕ ಬದಲಾವಣೆಗಳನ್ನು ನಾವು ಕಂಡಿದ್ದೇವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಬಸವಲಿಂಗಯ್ಯ, ಪತ್ರಕರ್ತ ಆರ್.ಜೆ.ಹಳ್ಳಿನಾಗರಾಜು, ಹುಣಸೆವಾಡಿ ರಾಜನ್ ಸೇರಿದಂತೆ ಹಲವು ಹಿರಿಯ ರಂಗಕರ್ಮಿಗಳು ಭಾಗವಹಿಸಿದ್ದರು.





