‘2022ರೊಳಗೆ ಬಡವರಿಗಾಗಿ 5 ಕೋಟಿ ಮನೆಗಳ ನಿರ್ಮಾಣ’

ನಯಾ ರಾಯ್‌ಪುರ.ಫೆ.21: ರವಿವಾರ ಇಲ್ಲಿ ‘‘ಪ್ರಧಾನ ಮಂತ್ರಿ ಆವಾಸ್ ಯೋಜನಾ’’ಗೆ ಶಿಲಾನ್ಯಾಸವನ್ನು ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿಯವರು, 2022ರೊಳಗೆ ಬಡವರಿಗಾಗಿ ಐದು ಕೋಟಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಕೌಶಲ ಅಭಿವೃದ್ಧಿಯ ಅಗತ್ಯಕ್ಕೆ ಒತ್ತು ನೀಡಿದ ಅವರು,ಉದ್ಯೋಗ ಸೃಷ್ಟಿಕರ್ತರಾಗುವಂತೆ ಇದೇ ವೇಳೆ ಯುವಜನತೆಗೆ ಕರೆ ನೀಡಿದರು.
ಸ್ವಾತಂತ್ರ ದೊರೆತು ಇಷ್ಟೆಲ್ಲ ವರ್ಷಗಳಾದರೂ ದೇಶದಲ್ಲಿ ಇನ್ನೂ ಐದು ಕೋಟಿ ಜನರು ಸ್ವಂತ ಮನೆಗಳನ್ನು ಹೊಂದಿಲ್ಲ. ಈ ಪೈಕಿ ಎರಡು ಕೋಟಿ ಜನರು ನಗರಗಳಲ್ಲಿದ್ದರೆ ಮೂರು ಕೋಟಿ ಜನರು ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ. 2022ರಲ್ಲಿ ಭಾರತವು ತನ್ನ 75ನೆ ಸ್ವಾತಂತ್ರೋತ್ಸವವನ್ನು ಆಚರಿಸಲಿದ್ದು, ಆ ವೇಳೆಗೆ ತಮಗೆ ಎಂತಹ ಭಾರತವು ಬೇಕು ಎನ್ನುವ ಬಗ್ಗೆ ಪ್ರತಿಯೊಬ್ಬ ಭಾರತೀಯರು ಚಿಂತನೆ ನಡೆಸಬೇಕು ಎಂದರು.
2022ರೊಳಗೆ ಬಡವರಿಗಾಗಿ ಐದು ಕೋಟಿ ಮನೆಗಳು ನಿರ್ಮಾಣಗೊಳ್ಳುವಂತಾಗಲು ಕೇಂದ್ರ ಮತ್ತು ರಾಜ್ಯಸರಕಾರಗಳು ಜೊತೆಯಾಗಿ ಶ್ರಮಿಸಲಿವೆ ಎಂದ ಅವರು, ಇದು ಮೂಲಸೌಕರ್ಯ ಯೋಜನೆಯಲ್ಲ.ಬಡವರ ಕನಸುಗಳಿಗೆ ಬಲ ತುಂಬಲು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು. ಈ ಯೋಜನೆಯು ಹಲವಾರು ಉದ್ಯೋಗಗಳನ್ನೂ ಸೃಷ್ಟಿಸಲಿದೆ ಎಂದೂ ಅವರು ಹೇಳಿದರು.





