ಕನ್ಹಯ್ಯ ಬಿಡುಗಡೆಯಾದ ನಂತರ ಖಾಲಿದ್ ಬೆಂಬಲಕ್ಕೆ ನಿಲ್ಲುವುದೇ ಜೆಎನ್‌ಯು?

ನವದೆಹಲಿ : ಜೆಎನ್‌ಯು ಘಟನೆ ನಡೆದಂದಿನಿಂದ ನಾಪತ್ತೆಯಾಗಿದ್ದ ಅಲ್ಲಿನ ವಿವಾದಾಸ್ಪದ ಕಾರ್ಯಕ್ರಮವನ್ನು ಆಯೋಜಿಸಿದ್ದವನೆನ್ನಲಾದ ಉಮರ್ ಖಾಲಿದ್ ರವಿವಾರ ರಾತ್ರಿ ಕನಿಷ್ಠ ಐದು ಇತರ ಆಪಾದಿತ ವಿದ್ಯಾರ್ಥಿಗಳೊಂದಿಗೆ ಕ್ಯಾಂಪಸ್ಸಿನಲ್ಲಿ ಕಾಣಿಸಿಕೊಂಡು ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಿದ್ದು, ಇಡೀ ವಿದ್ಯಮಾನಕ್ಕೇ ಹೊಸ ತಿರುವನ್ನು ನೀಡುವ ಸೂಚನೆಯಿದೆ.
ದೆಹಲಿ ಪೊಲೀಸರು ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ನಾಯಕ ಕನ್ಹಯ್ಯಾ ಕುಮಾರ್‌ನನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿದಂದಿನಿಂದ ಇವರೆಲ್ಲಾ ನಾಪತ್ತೆಯಾಗಿದ್ದರು.
ರವಿವಾರ ಸಂಜೆಯ ಬೆಳವಣಿಗೆಯ ನಂತರ ಜೆಎನ್‌ಯು ಆಡಳಿತ ಹಾಗೂ ಶಿಕ್ಷಕರು ಪೊಲೀಸರನ್ನು ಕ್ಯಾಂಪಸ್ಸಿನೊಳಗೆ ಪ್ರವೇಶಿಸಲು ಅನುಮತಿಸದಿರಲು ನಿರ್ಧರಿಸಿರುವುದು ಹೋರಾಟದ ಕಿಚ್ಚು ಮುಂದುವರಿಯುವಂತೆ ನೋಡಿಕೊಳ್ಳಲೆಂಬ ಉದ್ದೇಶದಿಂದ ಎಂಬುದು ಹಲವರ ವಾದವಾಗಿದೆ.
ಈತನ್ಮಧ್ಯೆ ಕುಮಾರ್‌ನ ಜಾಮೀನು ಅರ್ಜಿ ದೆಹಲಿ ಹೈಕೋರ್ಟಿನ ಮುಂದೆ ಮಂಗಳವಾರ ಬರಲಿದ್ದು ದೆಹಲಿ ಪೊಲೀಸರು ಇದನ್ನು ವಿರೋಧಿಸದಿರಲು ನಿರ್ಧರಿಸಿರುವುದರಿಂದ ಕನ್ಹಯ್ಯೆಗೆ ಜಾಮೀನು ಸಿಗುವ ಎಲ್ಲಾ ಸಾಧ್ಯತೆಯೂ ಇದೆ. ತರುವಾಯ ಜೆಎನ್‌ಯು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹಾಗೂಪ್ರತಿಭಟನೆಗಳನ್ನು ಬೆಂಬಲಿಸುತ್ತಿರುವ ವಿದ್ಯಾರ್ಥಿನಿ ದಿವ್ಯಾ ಗರ್ಗ್ ಪ್ರಕಾರ ಒಮ್ಮೆ ಕನ್ಹಯ್ಯಾ ಬಿಡುಗಡೆಯಾದನೆಂದರೆ ಪ್ರತಿಭಟನೆಗಳ ಬಣ್ಣವೇ ಬದಲಾಗಿ ಅವು ತಣ್ಣಗಾಗುವ ಸಂಭವವಿದೆ. ‘‘ಮತ್ತೆ ತರಗತಿಗಳು ಪ್ರಾರಂಭವಾಗುವವು.ಕೆಲವರು ಪ್ರತಿಭಟನೆಗಳನ್ನು ಮುಂದುವರಿಸಿದರೂ ಅದು ಅರೆ ಮನಸ್ಸಿನಿಂದ ನಡೆಯಬಹದು," ಎಂದು ಆಕೆ ಹೇಳುತ್ತಾರೆ.
ಖಾಲಿದ್ ಮಾತ್ರವಲ್ಲಿ ಈ ಪ್ರಕರಣದಲ್ಲಿ ದೆಹಲಿ ಪೊಲೀಸರ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ಇತರ ವಿದ್ಯಾರ್ಥಿಗಳಿಗೆ ಕನ್ಹಯ್ಯಾ ಬಿಡುಗಡೆಯಾದ ನಂತರ ಎಷ್ಟರ ಮಟ್ಟಿನ ಬೆಂಬಲ ಸಿಗಬಹುದೆಂಬುದರ ಬಗ್ಗೆಯೂ ಅವರಿಗೆ ಸಂದೇಹವಿದೆ.
ಇನ್ನಿತರ ವಿದ್ಯಾರ್ಥಿಗಳ ಪ್ರಕಾರ ಇದೀಗ ವಿಶ್ವವಿದ್ಯಾನಿಲಯಕ್ಕೆ ವಾಪಸಾಗಿರುವ ಉಮರ್ ಖಾಲಿದ್‌ನನ್ನು ಸಮರ್ಥಿಸುವುದು ಕಷ್ಟಕರವಾಗಬಹುದು. ಆತ ಸಂಸತ್ ದಾಳಿ ಪ್ರಕರಣದ ದೋಷಿ ಅಫ್ಝಲ್ ಗುರು ಬೆಂಬಲವಾಗಿ ಕೂಗಿದ್ದನೆನ್ನಲಾದ ಘೋಷಣೆಗಳು ಜನರಿಗೆ ಅಷ್ಟೊಂದು ಸರಿ ಕಾಣದಿರಬಹುದೆಂದು ಅವರು ಹೇಳುತ್ತಾರೆ.
ಇತ್ತ ಕಳೆದೊಂದು ವಾರದಿಂದ ಉಮರ್ ಖಾಲಿದ್ ಸುದ್ದಿಯಲ್ಲಿರುವಂತೆಯೇ ಆತನ ಸಹೋದರಿಯರು ಹಾಗೂ ಕುಟುಂಬತಮಗೆ ಅನಾಮಿಕ ವ್ಯಕ್ತಿಗಳಿಂದ ಬೆದರಿಕೆಗಳು ಬರುತ್ತಿವೆಯೆಂದು ಹೇಳುತ್ತಿದ್ದಾರೆ. ಅಮೆರಿಕಾದ ವಿಶ್ವವಿದ್ಯಾನಿಲಯವೊಂದರಲ್ಲಿ ಪಿ.ಹೆಚ್‌ಡಿ ವ್ಯಾಸಂಗ ಮಾಡುತ್ತಿರುವ ಆತನ ಸಹೋದರಿ ಮರ್ಯಮ್ ಫಾತಿಮಾ ತಾನು ಭಾರತ ವಿರೋಧಿ ಘೋಷಣೆಗಳನ್ನು ಒಪ್ಪುವುದಿಲ್ಲವಾದರೂ ಏನಾದರೂ ಕುತಂತ್ರ ನಡೆದಿರಬಹುದಾದ ಸಂದೇಹ ವ್ಯಕ್ತಪಡಿಸಿದ್ದಾರೆ.
ತರುವಾಯ ಜೆನ್‌ಯು ವಿದ್ಯಾರ್ಥಿ ಯೂನಿಯನ್ ಉಪಾಧ್ಯಕ್ಷೆ ಶೆಹಲಾ ರಶೀದ್ ಹೀಗೆ ಹೇಳುತ್ತಿದ್ದಾರೆ -‘‘ನಾವೆಲ್ಲರೂ ಕನ್ಹಯ್ಯಾ ಪರವಾಗಿ ಮಾತ್ರವಲ್ಲದೆ ಇಡೀ ವಿಶ್ವವಿದ್ಯಾನಿಲಯದ ಪರವಾಗಿ ಯಾವುದೇ ವಿಷಯದಲ್ಲೂ ಅಸಮ್ಮತಿ ವ್ಯಕ್ತಪಡಿಸುವ ನಮ್ಮ ಹಕ್ಕನ್ನು ದೃಢಪಡಿಸಲು ಹೋರಾಡುತ್ತಿದ್ದೇವೆ.’’







