ಹೆಂಡತಿಯ ಡಕಾಯಿತ ತಾತನಿಂದ ತನ್ನಲ್ಲಿ ಹೇರಳ ಆಸ್ತಿಯಿದೆಯೆಂದು ಸಬೂಬು ನೀಡಿದ ಐಟಿ ಅಧಿಕಾರಿ!

ಜೈಪುರ್ : ಅಕ್ರಮ ಆಸ್ತಿ ಪ್ರಕರಣ ಸಂಬಂಧ ಸಿಬಿಐ ತನಿಖೆಯೆದುರಿಸುತ್ತಿರುವ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರೊಬ್ಬರು ತನಿಖೆಯ ವೇಳೆ ಇಷ್ಟೊಂದು ಆಸ್ತಿಯ ಮೂಲ ಯಾವುದು ಎಂಬ ಪ್ರಶ್ನೆಗೆ ನೀಡಿದ ಉತ್ತರ ಅತ್ಯಂತ ಸ್ವಾರಸ್ಯಕರ ಹಾಗೂ ವಿಚಿತ್ರವಾಗಿದೆ.
ತಮ್ಮ ಹೆಂಡತಿಯ ತಾತ ಬಂದೂಕುಧಾರಿ ಡಕಾಯಿತನಾಗಿದ್ದು ಆತ ನೀಡಿದ ಬೆಲೆಬಾಳುವ ವಸ್ತುಗಳಿಂದಲೇ ತನ್ನ ಆಸ್ತಿ ವೃದ್ಧಿಸಿದೆಯೆಂಬ ಸಬೂಬನ್ನು ಪ್ರಸಕ್ತ ಇಂದೋರಿನಲ್ಲಿ ಸೇವೆಯಲ್ಲಿರುವ ರಾಮ್ ಅವತಾರ್ ಸಿಂಗ್ ಹೇಳಿದ್ದಾರೆ.
ಅವರ ಪತ್ನಿ ಸುಶೀಲಾ ಕೂಡ ತನ್ನ ಪತಿಗೆ ಈ ವಿಚಾರದಲ್ಲಿ ಸಾಥ್ ನೀಡಿದ್ದು ಆಕೆಯ ತಾತ ಮದುವೆಯ ಉಡುಗೊರೆಯಾಗಿ 80 ತೊಲೆ ಬಂಗಾರ ( ಒಂದು ತೊಲೆ 11.663 ಗ್ರಾಂಗೆ ಸಮ) ನೀಡಿದ್ದರೆಂದು ಅದರ ಮೌಲ್ಯ ಇದೀಗ ರೂ 24 ಲಕ್ಷವೆಂದೂ ತಿಳಿಸಿದ್ದಾಳೆ.
ಆದರೆ ಈ ಸಬೂಬು ಅವರನ್ನು ಈ ಪ್ರಕರಣದಿಂದ ಬಚಾವ್ ಮಾಡುವುದಿಲ್ಲ. ಆರೋಪಿಗಳು ಸಾಮಾನ್ಯವಾಗಿ ತಮ್ಮ ಅಕ್ರಮ ಆಸ್ತಿ ಹೇಗೆ ಬಂತೆಂಬುದಕ್ಕೆ ಕೆಲವೊಂದು ಕಾರಣಗಳನ್ನು ನೀಡಬಹುದಾದರೂ ಡಕಾಯಿತ ಅಜ್ಜನಿಂದಾಗಿ ಇಷ್ಟೆಲ್ಲಾ ಆಸ್ತಿ ಬಂದಿತೆಂದು ನಂಬಲಸಾಧ್ಯವಾದ ವಾದವಾಗಿದೆಯೆಂದು ಹಿರಿಯ ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಅಧಿಕಾರಿಯ ವಿರುದ್ಧ ಆರೋಪ ಪಟ್ಟಿ ಹೊರಿಸಿ ಅವರನ್ನು 2002ರಲ್ಲಿ ಬಂಧಿಸಿದ್ದಾಗ ಆತ ಜೈಪುರದಲ್ಲಿ ಸೇವೆ ಸಲ್ಲಿಸುತ್ತಿದ್ದ. ಸಿಂಗ್, ಆತನ ಪತ್ನಿ ಸುಶೀಲಾ, ಆತನ ಮೈದುನ ಹಾಗೂ ಇನ್ನೊಬ್ಬ ಸಂಬಂಧಿಯ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
ತನ್ನ ವಿರುದ್ಧದ ಚಾರ್ಜ್ ಶೀಟ್ ರದ್ದುಪಡಿಸಬೇಕೆಂದು ಕೋರಿ ಸಿಂಗ್ ಈ ತಿಂಗಳು ಜೈಪುರದಲ್ಲಿರುವ ಸಿಬಿಐ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದು ತನ್ನ ವಿರುದ್ಧ ಪ್ರಕರಣ ದಾಖಲಿಸಿರುವುದು ಕಾನೂನುಬಾಹಿರವೆಂದಿದ್ದಾರೆ.
ಆದರೆ ತನ್ನ ಅಕ್ರಮ ಆಸ್ತಿಯ ಬಗ್ಗೆ ಸಿಂಗ್ ನೀಡಿದ ಸಮರ್ಥನೆ ಹಾಗೂ ನೆಪವು ವಿಚಿತ್ರ ಹಾಗೂ ಒಪ್ಪತಕ್ಕಂತಹುದ್ದಲ್ಲವೆಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.







