‘‘ನಾನೊಬ್ಬ ಮುಸ್ಲಿಂ, ನಾನು ನಿಮ್ಮನ್ನು ಇಷ್ಟ ಪಡುತ್ತೇನೆ," ಎಂದು ಟ್ರಂಪ್‌ಗೆ ಹೇಳಿದ ಈಜಿಪ್ಟ್ ಉದ್ಯಮಿ!
ಡೊನಾಲ್ಡ್ ಟ್ರಂಪ್ ಗೂ ಒಬ್ಬ ಮುಸ್ಲಿಮ್ ಅಭಿಮಾನಿ

ಕ್ಯಾರೋಲಿನಾ : ಈಜಿಪ್ಟ್ ಮೂಲದ ಉದ್ಯಮಿ ಎಲ್ಹಾಮಿ ಇಬ್ರಾಹೀಂ(62) ಓರ್ವ ಮುಸಲ್ಮಾನನಾಗಿದ್ದರೂ ಆತನಿಗೆ ಇತ್ತೀಚಿಗಿನ ದಿನಗಳಲ್ಲಿ ಇತರ ಮುಸಲ್ಮಾನರನ್ನು ಕಂಡರೆ ಆಗದು, ಆದರೆ ಅಮೆರಿಕಾ ಅಧ್ಯಕ್ಷ ಹುದ್ದೆಗೆ ರಿಪಬ್ಲಿಕನ್ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಅಂದರೆ ಆತನಿಗೆ ಬಹಳ ಇಷ್ಟ.
ಅಮೆರಿಕಾಗೆ 1981ರಲ್ಲಿ ವಲಸೆ ಬಂದು ಎರಡು ದಶಕಗಳ ನಂತರ ಅಲ್ಲಿನ ಪೌರತ್ವವನ್ನು ಪಡೆದ ಇಬ್ರಾಹೀಂಗೆ ಈಜಿಪ್ಟ್ ದೇಶದಲ್ಲಾಗುತ್ತಿರುವ ಬದಲಾವಣೆಗಳು ಗಾಬರಿ ತಂದಿವೆ. ಅಲ್ಲಿನ ಹೆಚ್ಚುತ್ತಿರುವ ನಿರುದ್ಯೋಗದ ಸಮಸ್ಯೆ ಹಾಗೂ ಬಡತನ ಹಲವಾರು ಯುವಕರನ್ನು ಧಾರ್ಮಿಕ ಭಯೋತ್ಪಾದನೆಯತ್ತ ಹೆಜ್ಜೆಯಿಡುವಂತೆ ಮಾಡಿದೆಯೆಂಬುದು ಇಬ್ರಾಹೀಂ ಅಭಿಪ್ರಾಯ.
ಮುಸ್ಲಿಮರು ಅಮೆರಿಕಾದ ಸುರಕ್ಷತೆಗೆ ಬೆದರಿಕೆಯೊಡ್ಡುತ್ತಾರೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳುವ ತನಕ ಅವರ ಅಮೆರಿಕಾ ಪ್ರವೇಶಕ್ಕೆ ನಿಷೇಧ ಹೇರಬೇಕೆಂಬ ಟ್ರಂಪ್ಪ್ರಸ್ತಾಪವನ್ನು ಅದು ಮುಂದೆ ತನಗೇ ತೊಂದರೆಯುಂಟು ಮಾಡುವ ಸಂಭವವಿದ್ದರೂ ಇಬ್ರಾಹೀಂ ಸ್ವಾಗತಿಸುತ್ತಾರೆ.
ಇದೇ ಕಾರಣಕ್ಕೆ ನಿಯಮತವಾಗಿ ಮಸೀದಿಗೆ ಹೋಗದ ತಾನು ದಕ್ಷಿಣ ಕ್ಯಾರೊಲಿನಾದ ಮೈರ್ಟಲ್ ಬೀಚ್ ಸಮೀಪ ರ್ಯಾಲಿ ನಡೆಸಿದ್ದ ಟ್ರಂಪ್ ಅವರನ್ನು ಭೇಟಿಯಾಗಿ ‘‘ನಾನೊಬ್ಬ ಮುಸ್ಲಿಂ ಹಾಗೂ ನಾನು ನಿಮ್ಮನ್ನು ಇಷ್ಟಪಡುತ್ತೇನೆ,’’ಎಂದು ಹೇಳಿದೆ ಎಂದು ಇಬ್ರಾಹಿಂ ವಿವರಿಸುತ್ತಾರೆ. ತನ್ನ ಭೇಟಿಯ ವೀಡಿಯೋವನ್ನು ತನ್ನ ಫೇಸ್ಬುಕ್ ಪುಟದಲ್ಲಿಯೂ ಇಬ್ರಾಹೀಂ ಹೆಮ್ಮೆಯಿಂದ ಅಪ್‌ಲೋಡ್ ಮಾಡಿದ್ದಾರೆ.
‘‘ಅವರು ನನ್ನನ್ನು ಅಮೆರಿಕಾಗೆ ಬರದಂತೆ ತಡೆದರೆ ಸರಿಯೆನ್ನುತ್ತೇನೆ. ನನ್ನ ಅಮೆರಿಕಾ ನಿಷ್ಠೆಯನ್ನು ಪರೀಕ್ಷೆಗೊಳಪಡಿಸಬೇಕೆಂದರೆ ಅದಕ್ಕೆ ಸಹಿ ಹಾಕುವವರಲ್ಲಿ ನಾನು ಮೊದಲಿಗನಾಗುತ್ತೇನೆ,’’ಎನ್ನುತ್ತಾರೆ ಇಬ್ರಾಹೀಂ.
ಈಜಿಪ್ಟಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಆಗಿನ ಅಧ್ಯಕ್ಷ ಅನ್ವರ್ ಸಾದತ್ ಇಸ್ರೇಲ್ ಜತೆ ಯುದ್ಧಕ್ಕೆ ಹೋಗದಿರುವುದರ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕೆಇಬ್ರಾಹೀಂ ಎರಡು ಬಾರಿ ಜೈಲು ವಾಸ ಅನುಭವಿಸಿದ್ದರಲ್ಲದೆ, ಸ್ಫೋಟವೊಂದರಲ್ಲಿ ತಮ್ಮ ಒಂದು ಕಣ್ಣನ್ನೂ ಕಳೆದುಕೊಂಡಿದ್ದರು. ಮುಂದೆ ಪದವಿ ಪೂರ್ಣಗೊಳಿಸಿದ ಬಳಿಕ ಯೆಮೆನಿಗೆ ಹೋಗಿ ಅಲ್ಲಿನ ಅಮೆರಿಕಾ ಕಾನ್ಸುಲ್ ಜನರಲ್‌ರೊಂದಿಗಿನ ಸ್ನೇಹ ಇಬ್ರಾಹಿಂ ಅಮೆರಿಕಾಗೆ ವಾಸಸ್ಥಾನ ಬದಲಿಸಲು ಕಾರಣವಾಯಿತು.







