ತನ್ನ ಮೇಕೆಗಳನ್ನು ಮಾರಿ ಶೌಚಾಲಯ ನಿರ್ಮಿಸಿದ ಶತಾಯುಷಿಗೆ ನಮಿಸಿದ ಪ್ರಧಾನಿ ಮೋದಿ

ಛತ್ತೀಸ್‌ಗಢ್ : ತಮ್ಮಲ್ಲಿದ್ದ ಎಂಟರಿಂದ ಹತ್ತು ಮೇಕೆಗಳನ್ನು ಮಾರಿ ಅದರಿಂದ ಬಂದ ಹಣದಿಂದ ಮನೆಯಲ್ಲಿ ಶೌಚಾಲಯ ನಿರ್ಮಿಸಿ ಇತರ ರರಿಗೆ ಮಾದರಿಯಾದ ಛತ್ತೀಸ್‌ಗಢದ ಧಮ್ತರಿ ಜಿಲ್ಲೆಯ ಕೊಟಾಭರ್ರಿ ಗ್ರಾಮದ ಶತಾಯುಷಿ ಮಹಿಳೆ ಕುನ್ವರ್ ಭಾಯಿಗೆ ಪ್ರಧಾನಿ ನರೇಂದ್ರ ಮೋದಿಯವರು ಶಿರಬಾಗಿ ವಂದಿಸಿ ಆಕೆಯನ್ನು ಅಭಿನಂದಿಸಿದರು.
ರಾಜ್ಯದ ನಕ್ಸಲ್ ಪೀಡಿತ ರಾಜಂದ್‌ಗಾಂವ್ ಜಿಲ್ಲೆಯ ಕರ್ರುಭತ್ ಎಂಬ ಗ್ರಾಮದಲ್ಲಿ ರುರ್ಬನ್ ಮಿಷನ್ ಯೋಜನೆಗೆ ಚಾಲನೆ ನೀಡಿದ ಮೋದಿಈ ವೃದ್ಧೆಯ ಕಾರ್ಯ ದೇಶದಲ್ಲಿ ಉತ್ತಮ ಬದಲಾವಣೆಗಳಾಗುತ್ತಿರುವ ದ್ಯೋತಕವೆಂದಿದ್ದಾರೆ.
‘‘ಹಿಂದುಳಿದ ಹಳ್ಳಿಯೊಂದರಲ್ಲಿ ವಾಸಿಸುವ 104 ವರ್ಷದ ವೃದ್ಧೆಯೊಬ್ಬಳು ಟಿವಿ ನೋಡದಿದ್ದರೂ, ಪತ್ರಿಕೆ ಓದದಿದ್ದರೂ ಸ್ವಚ್ಛ ಭಾರತ ಮಿಷನ್ ಅನ್ವಯ ಶೌಚಾಲಯಗಳನ್ನು ನಿರ್ಮಿಸಬೇಕೆಂಬ ಸಂದೇಶ ಆಕೆಯನ್ನು ತಲುಪಿದೆ. ಮೇಕೆಗಳನ್ನು ಮಾರಿ ತನ್ನ ಮನೆಯಲ್ಲಿ ಶೌಚಾಲಯ ನಿರ್ಮಿಸಿದ ಆಕೆ ಇತರರನ್ನೂ ಶೌಚಾಲಯ ನಿರ್ಮಿಸಲು ಹುರಿದುಂಬಿಸಿದಳು,’’ಎಂದು ಪ್ರಧಾನಿ ಆಕೆಯನ್ನು ಪ್ರಶಂಸಿಸಿದರು.
‘‘ಈಕೆ ಎಲ್ಲರಿಗೂ, ಮುಖ್ಯವಾಗಿ ಯುವಕರಿಗೆಸ್ಫೂರ್ತಿಯ ಸೆಲೆಯಾಗಿದ್ದಾರೆ,’’ಎಂದು ಮೋದಿ ಹೇಳಿದರು.
‘‘ನನ್ನ ಸುದ್ದಿ ಪ್ರಸಾರ ಮಾಡುವ ಬದಲು ಈ ಮಹಿಳೆಯ ಕಾರ್ಯವನ್ನು ಜನರಿಗೆತಿಳಿಸಬೇಕೆಂದು ನಾನು ಮಾಧ್ಯಮವನ್ನು ವಿನಂತಿಸುತ್ತೇನೆ,’’ಎಂದು ಈ ಸಂದರ್ಭದಲ್ಲಿ ಮೋದಿ ಹೇಳಿದರು.
ಅಂಬಘರ್ ಚೌಕಿ ಹಾಗೂ ಛುರಿಯಾ ಪ್ರದೇಶಗಳನ್ನು ಬಯಲು ಶೌಚಾಲಯ ಮುಕ್ತ ಪ್ರದೇಶಗಳೆಂದು ಮೋದಿ ಈ ಸಂದರ್ಭ ಘೋಷಿಸಿದರು.
ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮಹಿಳೆಯರ ಉನ್ನತಿಗಾಗಿ ಶ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ಫೂಲ್‌ಬಸನ್ ಭಾಯಿ ಯಾದವ್ ಅವರನ್ನು ಕೂಡ ಮೋದಿ ಈ ಸಮಾರಂಭದಲ್ಲಿ ಸನ್ಮಾನಿಸಿದರು.







