ಸುಳ್ಯ: ಮತ ಎಣಿಕೆಗೆ ಸಿದ್ಧತೆ ಪೂರ್ಣ ಜಿಲ್ಲಾ ಪಂಚಾಯತ್‌ಗೆ 12 ಟೇಬಲ್, ತಾಲೂಕು ಪಂಚಾಯತ್‌ಗೆ 13 ಟೇಬಲ್

ಸುಳ್ಯ: ಫೆ.20ರಂದು ನಡೆದಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ಸುಳ್ಯ ತಾಲೂಕಿನ ಮತಗಳ ಎಣಿಕೆ ಮಂಗಳವಾರ ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ. ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಒಂದು ಕ್ಷೇತ್ರಕ್ಕೆ ಒಂದು ಟೇಬಲ್‌ನಂತೆ 13 ಟೇಬಲ್‌ಗಳನ್ನು ಎರಡು ಕೊಠಡಿಗಳಲ್ಲಿ ಅಳವಡಿಸಲಾಗುವುದು. ಜಿಲ್ಲಾ ಪಂಚಾಯತ್‌ನ 4 ಕ್ಷೇತ್ರಗಳ ಮತಎಣಿಕೆ ಕಾಲೇಜಿನ 2ನೇ ಮಹಡಿಯ ಸಭಾಭವನದಲ್ಲಿ ನಡೆಯುವುದು. ಒಂದೊಂದು ಕ್ಷೇತ್ರಕ್ಕೆ ತಲಾ 3 ಟೇಬಲ್‌ಗಳನ್ನು ಅಳವಡಿಸಲಾಗಿದೆ. ಆರಂಭದಲ್ಲಿ ಒಂದೊಂದು ಮತ ಯಂತ್ರದ ವಿವರ ಪಡೆಯಲು 15 ನಿಮಿಷ ಬೇಕಾಗಬಹುದು. ಬಳಿಕ ಎಣಿಕೆಯು ತಲಾ 10 ನಿಮಿಷಗಳಲ್ಲಿ ನಡೆಯಬಹುದು. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳುವುದು. ಪ್ರಥಮವಾಗಿ ಅಂಚೆ ಮತಪತ್ರಗಳನ್ನು ತೆರೆದು, ಎಣಿಕೆಗೈದು ಬಳಿಕ ಮತಯಂತ್ರಗಳನ್ನು ತೆರೆಯುವ ಪ್ರಕ್ರಿಯೆ ಆರಂಭಗೊಳ್ಳುವುದು ಕಡಿಮೆ ಮತಗಟ್ಟೆಗಳಿರುವ ತಾ.ಪಂ ಕ್ಷೇತ್ರಗಳ ರಿಸಲ್ಟ್ 9.30ರಿಂದ 10 ಗಂಟೆಯ ಒಳಗಾಗಿ ತಿಳಿಯಲು ಆರಂಭವಾಗುತ್ತದೆ. ಉಳಿದವುಗಳ ಲೆಕ್ಕ 10.30ರಿಂದ 11 ಗಂಟೆಯ ಒಳಗೆ ಅಂತಿಮಗೊಳ್ಳುವ ಸಾಧ್ಯತೆ ಇದೆ. ಎಣಿಕೆ ಪ್ರಕ್ರಿಯೆಯಲ್ಲಿ 25 ಟೇಬಲ್‌ಗಳಲ್ಲಿ 75 ಮಂದಿ ಮತಎಣಿಕೆ ಸಿಬ್ಬಂದಿ ಇತರ ಕಾರ್ಯಗಳಲ್ಲಿ 50 ಮಂದಿ ತೊಡಗಿಸಿಕೊಳ್ಳುತ್ತಾರೆ. ಭದ್ರತಾ ಕಾರ್ಯದಲ್ಲಿ ಸುಮಾರು 75 ಮಂದಿ ಪೋಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕ ದಳದವರು ಇರುತ್ತಾರೆ.
ಪೂರ್ವಭಾವಿ ಸಭೆ:
ಮತ ಎಣಿಕೆಯ ಹಿನ್ನೆಲೆಯಲ್ಲಿ ತಾಲೂಕು ಕಛೇರಿಯಲ್ಲಿ ಚುನಾವಣಾಧಿಕಾರಿ ಅರುಣಪ್ರಭ ರಾಜಕೀಯ ಪಕ್ಷ ಹಾಗೂ ಮಾಧ್ಯಮ ಪ್ರತಿನಿಧಿಗಳ ಸಭೆ ನಡೆಸಿ ಮಾಹಿತಿ ನೀಡಿದರು. ಮತ ಎಣಿಕೆ ಕೇಂದ್ರದ ಒಳಗೆ ಮತ ಎಣಿಕೆ ಏಜೆಂಟರಲ್ಲದೆ ಅಭ್ಯರ್ಥಿ ಅಥವಾ ಚುನಾವಣಾ ಏಜೆಂಟ್‌ಗೆ ಮಾತ್ರ ಹೋಗಲು ಅವಕಾಶವಿರುತ್ತದೆ. ಎಣಿಕೆ ಕೇಂದ್ರದೊಳಗೆ ನೀರಿನ ಬಾಟಲ್ ಸೇರಿದಂತೆ ಯಾವುದೇ ವಸ್ತುಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ. ನೀರು ಮತ್ತಿತರ ಸೌಲಭ್ಯಗಳಿಗೆ ಪಕ್ಕದ ಕೊಠಡಿಯಲ್ಲಿ ಅವಕಾಶ ಮಾಡಿಕೊಡಲಾಗುವುದು. ಇದುವರೆಗೆ ಚುನಾವಣೆ ಅತ್ಯಂತ ಶಾಂತಿಯುತವಾಗಿ ನಡೆದಿದೆ. ಮತ ಎಣಿಕೆಯನ್ನು ಕೂಡಾ ಶಾಂತಿಯುತವಾಗಿ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಅರುಣಪ್ರಭ ವಿನಂತಿಸಿದರು. ಮತ ಎಣಿಕೆ ಸಿಬ್ಬಂದಿಗಳು, ಅಧಿಕಾರಿಗಳು, ಮಾಧ್ಯಮದವರನ್ನು ಹೊರತುಪಡಿಸಿ ಎನ್.ಎಂ.ಸಿ.ಯ ಪ್ರಧಾನ ದ್ವಾರದಿಂದ ಒಳಗೆ ಹೋಗಲು ಯಾರಿಗೂ ಕೂಡ ಅವಕಾಶವಿಲ್ಲ. ವಾಹನಗಳಿಗೆ ಕೂಡಾ ಅವಕಾಶ ಮಾಡಿಕೊಡುವುದಿಲ್ಲ, ವಿಜಯೋತ್ಸವ, ಮೆರವಣಿಗೆಗಳಿಗೆ ಕೂಡಾ ಅವಕಾಶವಿಲ್ಲ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್.ಸತೀಶ್ ಹೇಳಿದರು. ತಾಲೂಕು ಪಂಚಾಯತ್ ಚುನಾವಣಾಧಿಕಾರಿ ಅನಂತಶಂಕರ್, ಸಹಾಯಕ ಚುನಾವಣಾಧಿಕಾರಿ ಕೆಂಪಲಿಂಗಪ್ಪ, ಜಿ.ಪಂ. ಸಹಾಯಕ ಚುನಾವಣಾಧಿಕಾರಿ ಚಂದ್ರಶೇಖರ ಪೇರಾಲು, ಎಸ್.ಐ.ಚಂದ್ರಶೇಖರ್, ಬಿಜೆಪಿ ಮುಖಂಡರಾದ ಉಮೇಶ್ ವಾಗ್ಲೆ, ಪಿ.ಜಿ.ಎಸ್.ಎನ್.ಪ್ರಸಾದ್, ಕಾಂಗ್ರೆಸ್ ಮುಖಂಡ ಪಿ.ಎಸ್.ಗಂಗಾಧರ್, ಜೆ.ಡಿ.ಎಸ್. ಅಭ್ಯರ್ಥಿ ರಾಮಚಂದ್ರ ಬಳ್ಳಡ್ಕ, ಪಕ್ಷೇತರ ಅಭ್ಯರ್ಥಿ ಅನಿಲ್ ಬಳ್ಳಡ್ಕ ಸಭೆಯಲ್ಲಿ ಉಪಸ್ಥಿತರಿದ್ದರು.







