ಸುಳ್ಯ: ಪರಿಷತ್ತನ್ನು ಪ್ರೇರಕ ಶಕ್ತಿಯಾಗಿ ಪರಿವರ್ತನೆ: ಜಯಪ್ರಕಾಶ್ ಗೌಡ
ಸುಳ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಚುನಾವಣೆಯು ಫೆಬ್ರವರಿ 28ರಂದು ನಡೆಯಲಿದ್ದು, ಸ್ಪರ್ಧಾ ಕಣದಲ್ಲಿರುವ ಜಯಪ್ರಕಾಶ್ ಗೌಡ ಸುಳ್ಯದಲ್ಲಿ ಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾನು ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದರೆ ಪರಿಷತ್ತನ್ನು ಒಂದು ಪ್ರೇರಕ ಶಕ್ತಿಯಾಗಿ ಪರಿವರ್ತಿಸಿ ಜಿಲ್ಲಾ ಮತ್ತು ತಾಲೂಕು ಘಟಕಗಳನ್ನು ಅತ್ಯಂತ ಕ್ರಿಯಾಶಾಲಿಯಾಗಿರುವಂತೆ ವ್ಯವಸ್ಥೆಗೊಳಿಸಲಾಗುವುದು ಎಂದರು. ಶತಮಾನೋತ್ಸವ ಸಂದರ್ಭದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ಸರ್ಕಾರದಿಂದಲೇ ನೇರವಾಗಿ ನಿವೇಶನ ಮತ್ತು ಧನ ಸಹಾಯ ಮಂಜೂರಾಗುವಂತೆ ಪ್ರಯತ್ನಿಸುವುದು, ಕನಿಷ್ಠ ವರ್ಷಕ್ಕೆ ಹತ್ತು ಮೌಲಿಕ ಪುಸ್ತಕಗಳನ್ನು ಪ್ರಕಟಿಸುವುದು, ಜಿಲ್ಲಾ ಘಟಕಗಳಿಗೂ ಪ್ರಕಟಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ವ್ಯವಸ್ಥೆ ಮಾಡುವುದು, ಪರಿಷತ್ತಿನ ಸಂಶೋಧನಾ ಕೇಂದ್ರವನ್ನು ಪುನರ್ ನವೀಕರಿಸಿ ಪ್ರಸ್ತುತ ಸಂದರ್ಭಕ್ಕೆ ಅಣಿಗೊಳಿಸುವುದು, ಹಾಗೂ ಸಂಶೋಧನಾ ಪತ್ರಿಕೆಯಾದ ‘ಪರಿಷತ್ಪತ್ರಿಕೆ’ಯು ನಿಯತವಾಗಿ ಹೊರಬರುವಂತೆ ಕ್ರಮ ಕೈಗೊಳ್ಳುವುದು, ಪ್ರಾಚೀನ-ಆರ್ವಾಚೀನ ಮಹಾಕವಿಗಳ ಸಾಹಿತ್ಯಕ್ಕೆ ಹಿರಿಯರ ಮಾರ್ಗದರ್ಶನದಲ್ಲಿ ಯುವಕರನ್ನು ಮುಖಾಮುಖಿಯಾಗಿಸಿ ಅಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಪುಸ್ತಕ ರೂಪದಲಲಿ ತರುವುದು. ಆ ಮೂಲಕ ಸಾಹಿತ್ಯಾಧ್ಯಯನದ ಹೊಸ ಆಯಾಮಗಳನ್ನು ಸೃಷ್ಠಿಸಿ ಪ್ರಸ್ತುತೀಕರಿಸುವುದುದಾಗಿ ಹೇಳಿದರು.
ತಾಲೂಕು ಘಟಕಗಳಿಗೂ ಚುನಾವಣೆ ಮೂಲಕ ಅಧ್ಯಕ್ಷರ ಆಯ್ಕೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಹಿತ್ಯ ಪರಿಷತ್ ಒಂದು ನೋಂದಾಯಿತ ಸಂಸ್ಥೆಯಾಗಿದ್ದು, ಬದಲಾವಣೆ ತರಬೇಕಾದರೆ ಇದಕ್ಕಾಗಿ ಜನರಲ್ ಬಾಡಿಯಲ್ಲಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಎಲ್ಲಾ ಸದಸ್ಯರೂ ಇದನ್ನು ಬೆಂಬಲಿಸಬೇಕು ಎಂದರು.
ಎಂ.ಬಿ.ಸದಾಶಿವ, ಮಹೇಶ್ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು





