ಸುಳ್ಯ: ರಸ್ತೆ ಅಭಿವೃದ್ಧಿಗೆ ಆಗ್ರಹ - ಪ್ರತಿಭಟನೆಗೆ ನಿರ್ಧಾರ
ಸುಳ್ಯ: ಸುಳ್ಯ ನಗರ ಪಂಚಾಯತ್‌ನ 12 ಮತ್ತು 14 ವಾರ್ಡ್ ವ್ಯಾಪ್ತಿಯಲ್ಲಿರುವ ಗುರುಂಪು ರಸ್ತೆಯ ಅಭಿವೃದ್ಧಿ ಮತ್ತು ಸಮರ್ಪಕ ಚರಂಡಿ ವ್ಯವಸ್ಥೆಗಾಗಿ ನಾಗರಿಕರು ಮಾ.3ರಂದು ಪ್ರತಿಭಟನೆ ನಡೆಸಲು ತಿರ್ಮಾನಿಸಿದ್ದಾರೆ.
ರಸ್ತೆ ತೀರಾ ಹದಗೆಟ್ಟಿದ್ದು ಮತ್ತು ಸುಸಜ್ಜಿತ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ತುಂಬಿ ಸೊಳ್ಳೆ ಕಾಟದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡಿ ಪರಿಸರ ಪ್ರದೇಶದ ನಿವಾಸಿಗಳ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಈ ರಸ್ತೆಯು ಅಂತರ್ ರಾಜ್ಯ ಸಂಪರ್ಕ ರಸ್ತೆಯಾಗಿದ್ದು, ಶಾಲಾ-ಕಾಲೇಜು, ಕೆ.ಎಫ್.ಡಿ.ಸಿ ಮತ್ತು ಸುಳ್ಯ ತಾಲೂಕಿನ ಹಲವಾರು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಾಗಿದೆ. ಈ ರಸ್ತೆಯ ದುಸ್ಥಿತಿಯ ವಿರುದ್ದ ಜ.25ರಂದು ಪ್ರತಿಭಟನೆ ನಡೆಸಲು ನಿರ್ದರಿಸಲಾಗಿತ್ತು, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಯೋಜಿತ ಪ್ರತಿಭಟನೆಗೆ ಅಧಿಕಾರಿಗಳಿಂದ ಅನುಮತಿ ದೊರೆಯದ ಕಾರಣ ಪ್ರತಿಭಟನೆಯನ್ನು ಮಾ.3ಕ್ಕೆ ಮುಂದೂಡಲಾಗಿತ್ತು. ಪ್ರತಿಭಟನೆಯ ಮಾಹಿತಿ ಪಡೆದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಳಪೆ ಕಾಮಗಾರಿ ನಡೆಸಿ ನಮ್ಮ ಹೋರಾಟವನ್ನು ರದ್ದು ಮಾಡುವ ಪ್ರಯತ್ನವನ್ನು ಮಾಡಿರುತ್ತಾರೆ. ಈ ಕಾಮಗಾರಿಯು ತೀರ ಕಳಪೆಯಾಗಿದ್ದು ಕಾಮಗಾರಿಯ ದಿನದಿಂದಲೇ ರಸ್ತೆ ಕಿತ್ತುಹೋಗಲು ಪ್ರಾರಂಭಗೊಂಡಿದೆ. ಈ ಕಳಪೆ ಕಾಮಗಾರಿಯ ವಿರುದ್ದ ಮತ್ತು ಸಂಪೂರ್ಣ ಡಾಮರೀಕರಣ, ಸುಸಜ್ಜಿತ ಚರಂಡಿ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದು ಗುರುಂಪು ನಾಗರಿಕ ಹಿತರಕ್ಷಣಾ ವೇದಿಕೆ ತಿಳಿಸಿದೆ.





