ಉಸ್ತುವಾರಿ ಸಚಿವರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕು ಇಲ್ಲ ಸಚಿವ ಸ್ಥಾನಬಿಟ್ಟು ತೆರಳಬೇಕು - ಪ್ರತಾಪಸಿಂಹ ನಾಯಕ್

ಬೆಳ್ತಂಗಡಿ: ದ.ಕ.ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೆ, ಕಾನೂನು ಬಾಹಿರವಾಗಿ ವರ್ತಿಸುತ್ತಿರುವ ಸಚಿವ ಅಭಯ ಚಂದ್ರ ಜೈನ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕು ಇಲ್ಲೇ ಸಚಿವ ಸ್ಥಾನಬಿಟ್ಟು ತೆರಳಬೇಕು ಇನ್ನೂ ಹೀಗೇ ಮುಂದುವರಿದರೆ ಅವರ ವಿರುದ್ದ ಬಿಜೆಪಿ ಹೋರಾಟ ನಡೆಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಎಚ್ಚರಿಸಿದರು.
ಅವರು ಸೋಮವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲೆಯ ಸಚಿವರುಗಳ ನಡತೆಗಳನ್ನು ವಿಶ್ಲೇಷಿಸಿ ಖಂಡಿಸಿದರು.
ಮೂಲ್ಕಿಯ ಪುರಸಭೆ ಚುನಾವಣೆ ಸಂದರ್ಭ ಸಚಿವ ಅಭಯಚಂದ್ರ ಜೈನ್ ರಿಕ್ಷಾದವರೊಂದಿಗೆ ನಡೆದುಕೊಂಡ ರೀತಿ, ಮೂಲ್ಕಿ ಪುರಸಭೆಯಲ್ಲಿ ಸಚಿವರು ಹೊಡೆದಾಟಕ್ಕೆ ಇಳಿದ ರೀತಿ, ಮೂಡುಬಿದರೆಯಲ್ಲಿ ಪತ್ರಕರ್ತನ ಮೇಲೆ ಹಾಕಿದ ಧಮ್ಕಿ, ಪುತ್ತಿಗೆಯಲ್ಲಿ ನಾಮಪತ್ರ ಸಲ್ಲಿಸಬೇಕಾದ ಸಂದರ್ಭ ತಹಸೀಲ್ದಾರರ ಕಚೇರಿಗೆ ನುಗ್ಗಿ ತೋರಿಸಿದ ವರ್ತನೆ, ಶಿರ್ತಾಡಿ-ಬೋರುಗುಡ್ಡೆ ಮತದಾನ ಕೇಂದ್ರದ ಬಳಿ ತೋರಿದ ದುರಹಂಕಾರದ ಮಾತು ಮತ್ತು ಗೂಂಡಾ ವರ್ತನೆ ಇತ್ಯಾದಿಗಳನ್ನು ಗಮನಿಸುವಾಗ ತಮ್ಮ ಸರಕಾರ ಬಂದ ಮೇಲೆ ಅಧಿಕಾರ ಶಾಶ್ವತ ಎಂಬ ರೀತಿಯಲ್ಲಿ ದರ್ಪ, ಅಹಂಕಾರದಿಂದ ವರ್ತಿಸುತ್ತಿದ್ದಾರೆ. ತಮ್ಮ ನಡತೆಯ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ತೋರಿಸಬೇಕಾದ ಸಚಿವರು ಕಾನೂನು ಕೈಗೆತ್ತಿಕೊಂಡು ಅಧಿಕಾರಿಗಳ ಮೇಲೆ ದರ್ಪ, ಒತ್ತಡ ತರುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಸಚಿವರೇ ಕಾನೂನು ಬಾಹಿರ ವರ್ತನೆ ತೋರಿದರೆ ಅವರ ಹಿಂಬಾಲಕರು ಹೊಡೆದಾಡಿಕೊಳ್ಳುವುದು ಆಶ್ಚರ್ಯತರುವ ಸಂಗತಿ ಅಲ್ಲ ಎಂದರು.
ಸಚಿವರದ್ದು ಹೀಗಾದರೆ ಇನ್ನು ಉಸ್ತುವಾರಿ ಸಚಿವರು ಕ್ರಿಮಿನಲ್‌ಗಳನ್ನು ಹಿಡಿದುಕೊಂಡೇ ತಿರುಗಾಡುತ್ತಾರೆ. ದಕ್ಷ ಪೋಲಿಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದು ನಾನೇ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಮರಳು ಮಾಫಿಯಾ ನಿರಂತರವಾಗಿರುವುದು, ಬೆಳ್ತಂಗಡಿಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಖೋಟಾನೋಟು ಹಂಚಿರುವುದನ್ನು ನೋಡಿದರೆ ಇದಕ್ಕೆಲ್ಲಾ ಆಡಳಿತ ಪಕ್ಷದ ವಿಪರೀತ ಹಸ್ತಕ್ಷೇಪವೇ ಕಾರಣ. ಜಿಲ್ಲೆಯಲ್ಲಿರುವ ಕುಮ್ಕಿ ಸಮಸ್ಯೆ, ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸಚಿವರು ಸಚಿವ ಸಂಪುಟದಲ್ಲಾಗಲಿ, ವಿಧಾನಸಭೆಯಲ್ಲಾಗಲೀ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳದೆ ಸಚಿವ ಸ್ಥಾನಕ್ಕೆ ಕಳಂಕ ತಂದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ರಾಜಕೀಯ ಪಕ್ಷಗಳು ಹೊರಾಟ ಮಾಡುವುದು ಸಮಾನ್ಯ. ಸಚಿವರುಗಳು ಸ್ಪಂದಿಸಬೇಕಾದದದ್ದು ಕರ್ತವ್ಯ. ಆದರೆ ಕಳೆದ ಎರಡೂ ವರೆ ವರ್ಷಗಳಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು, ಕಾಂಗ್ರೇಸ್ ಶಾಸಕರುಗಳು ನಡೆದುಕೊಂಡ ರೀತಿ ಖಂಡನೀಯವಾಗಿದೆ. ತಮ್ಮ ಸ್ಥಾನದಲ್ಲಿ ಗೌರವ ಉಳಿಸುವ ಸಾಮರ್ಥ್ಯ ಇಲ್ಲದಿದ್ದರೆ ಸ್ಥಾನವನ್ನು ಬಿಡುಬಿಡುವುದು ಒಳಿತು. ಇನ್ನಾದರೂ ತಮ್ಮ ನಡತೆಯನ್ನು ತಿದ್ದಿಕೊಳ್ಳದಿದ್ದರೆ ಜನಪರ ಹೋರಾಟದ ಮೂಲಕ ರಾಜೀನಾಮೆಗೂ ಆಗ್ರಹಿಸುತ್ತೇವೆ ಎಂದು ಪ್ರತಾಪಸಿಂಹ ಎಚ್ಚರಿಸಿದರು. ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಯುವ ಮೊರ್ಚಾ ಅಧ್ಯಕ್ಷ ರಂಜನ್ ಜಿ. ಗೌಡ, ಪಕ್ಷದ ಮಂಡಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಲ್ಮಂಜ ಗ್ರಾ.ಪಂ. ಸದಸ್ಯ ಕೃಷ್ಣಪ್ಪ ಗುಡಿಗಾರ್, ಎಸ್.ಸಿ. ಮೋರ್ಚಾದ ಅಧ್ಯಕ್ಷ ರಾಘವ, ಎಸ್.ಟಿ.ಮೋರ್ಚಾದ ಅಧ್ಯಕ್ಷ ಲಿಂಗಪ್ಪ ಇದ್ದರು.





