ಮುನ್ನೂರು ಸಿನೆಮಾಗಳ ಪಂಜಾಬಿ ಸೂಪರ್‌ಸ್ಟಾರ್ ಸತೀಶ್ ಕೌಲ್‌ರಲ್ಲೀಗ ಚಿಕ್ಕಾಸು ಇಲ್ಲ! ಚಿಕಿತ್ಸೆಗೂ ಗತಿಯಿಲ್ಲ!

ಪಂಜಾಬ್,ಫೆ22: ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಸೂಪರ್‌ಸ್ಟಾರ್‌ನ ಬದುಕು ಈಗ ಹೇಗಿದೆ ಗೊತ್ತಾ? ಕಾಶ್ಮೀರದಲ್ಲಿ ಹುಟ್ಟಿ ಎಂಬತ್ತರ ದಶಕದಲ್ಲಿ ಪಂಜಾಬಿ ಸಿನೆಮಾಗಳಲ್ಲಿ ದೊಡ್ಡ ಹೆಸರಾಗಿದ್ದ ಸತೀಶ್ ಕೌಲ್ ಈಗ ರೋಗಿಯಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೂ ಗತಿಯಿಲ್ಲದ ರೀತಿಯಲ್ಲಿದ್ದಾರೆ!. ಮುನ್ನೂರು ಪಂಜಾಬ್ ಮತ್ತು ಮೂವತ್ತು ಹಿಂದಿ ಫಿಲಂಗಳಲ್ಲಿ ಪಾತ್ರನಿರ್ವಹಿಸಿದ ಇವರು ದಿಲೀಪ್‌ಕುಮಾರ್, ದೇವ್ ಆನಂದ್, ಅಮಿತಾಬ್ ಬಚ್ಚನ್, ಶಾರೂಕ್ ಖಾನ್‌ರಂತಹ ಅತಿರಥ ಮಹಾರಥರಂತಹ ನಟರೊಂದಿಗೆ ನಟಿಸಿದ್ದಾರೆ. ಒಟ್ಟು ಫಿಲಂ ಇಂಡಸ್ಟ್ರಿಯಲ್ಲಿ ಮೂವತ್ತು ವರ್ಷ ಕೆಲಸಮಾಡಿದ ಇವರಿಗೆ ಇಂದು ಗತಿಯಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಜಾಬ್‌ನಲ್ಲಿ ಆಕ್ಟಿಂಗ್ ಸ್ಕೂಲ್ ತೆರೆದ ಸತೀಶ್ ಕೌಲ್‌ಗೆ ಹಣಕಾಸು ಅಡಚಣೆ ಉಂಟಾಯಿತು. ಅತ್ತ ಅವರ ನಟನಾ ತರಬೇತಿ ಶಾಲೆ ಸರಿಯಾಗಿ ನಡೆಯಲಿಲ್ಲ. ಮೂವತ್ತು ವರ್ಷಗಳಲ್ಲಿ ಗಳಿಸಿದ್ದೆಲ್ಲವನ್ನೂ ಅದಕ್ಕೆ ಧಾರೆ ಎರೆದಿದ್ದರು. ಅದ್ದೂರಿ ಕಾರಿನಲ್ಲಿ ಒಂದು ಕಾಲದಲ್ಲಿ ಓಡಾಡಿದ್ದ ವ್ಯಕ್ತಿ ಆಟೊದಲ್ಲಿ ಅಡ್ಡಾಡಬೇಕಾಗಿ ಬಂದಿತ್ತು. ಬಾತ್‌ರೂಮ್‌ನಲ್ಲಿ ಬಿದ್ದುಕಾಲು ಮುರಿದುಕೊಂಡರು. ಅದಕ್ಕಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೇರ್ಪಡೆಯಾಗಿ ಲಕ್ಷಾಂತರ ಹಣ ಚೆಲ್ಲಬೇಕಾಗಿ ಬಂದಿತ್ತು. ನಂತರ ಸಂಪಾದನೆಯಿಲ್ಲದ ಕೌಶಿಕ್ ಅಲ್ಲಿಂದ ಪಟಿಯಾಲದ ಜ್ಞಾನ ಸಾಗರ ಆಸ್ಪತ್ರೆಗೆ ದಾಖಲಾದರು. ಇವರ ಈ ಸ್ಥಿತಿ ಕಂಡು ಮರುಗಿದವರಿಲ್ಲವೆಂದಲ್ಲ. ನೆರವಿನ ಭರವಸೆ ನೀಡಿದವರೂ ಇದ್ದಾರೆ. ಆದರೆ ಅವೆಲ್ಲವೂ ಬಾಯಿಮಾತಲ್ಲೇ ಕೊನೆಯಾಗಿತ್ತು. ಪಟಿಯಾಲ ಆಸ್ಪತ್ರೆ ಈಗ ಮಾನವೀಯ ನೆಲೆಯಲ್ಲಿ ಉಚಿತ ಚಿಕಿತ್ಸೆ ನೀಡುತ್ತಿದೆ. ಮಹಾನ್ ನಟ ಕೊನೆಗಳಿಗೆಯಲ್ಲಿ ದಿವಾಳಿಯಾಗಿದ್ದರು. ದುಃಖಕರವೆಂದರೆ ಯಾವುದೇ ಸಮಾಜ ಸೇವಾ ಸಂಸ್ಥೆಗಳೂ ಇವರನ್ನು ಗಮನಿಸಿಲ್ಲವೆಂಬುದಾಗಿದೆ. ಯಾವುದೇ ಅಭಿಮಾನಿಗಳೂ ಅವರತ್ತ ಸುಳಿಯಲಿಲ್ಲ. ಹೆಂಡತಿ ಹಲವು ವರ್ಷಗಳ ಹಿಂದೆ ಇವರಿಗೆ ಡೈವೋರ್ಸ್ ಕೊಟ್ಟು ಅಮೆರಿಕದಲ್ಲಿದ್ದ ಪುತ್ರನ ಬಳಿಗೆ ಹೊರಟು ಹೋಗಿದ್ದಾರೆ. ಇರುವಒಬ್ಬಳು ಸಹೋದರಿ ಹೈದರಾಬಾದ್‌ಗೆ ಮದುವೆಯಾಗಿ ಹೋಗಿದ್ದಾರೆ. ಕೌಲ್ ಅವರಿಗೆ ಅವರದ್ದೇ ದೊಡ್ಡ ವಿಷಯವಾದ್ದರಿಂದ ತನ್ನನ್ನು ನೋಡಿಕೊಳ್ಳುವ ಶಕ್ತಿಯಿಲ್ಲ ಎಂದು ಹೇಳುತ್ತಾರೆ. ಅಮೆರಿಕದ ಮಗನಾಗಲಿ ಇತ್ತ ತಲೆಹಾಕಿಲ್ಲ. ಪಂಜಾಬ್ ಮುಖ್ಯಮಂತ್ರಿಯ ಕಾರ್ಯದರ್ಶಿ ಹರಿಚರಣ್ ಭೈಂಸ್ ಇತ್ತೀಚೆಗೆ ಭೇಟಿಯಾಗಿ ನೆರವಿನ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಯೊಂದಿಗೆ ಬಂದು ಭೇಟಿಯಾಗುವೆ ಎಂದು ಹೇಳಿದ್ದಾರೆ. ಸರಕಾರ ತನಗೆ ನೆರವು ನೀಡುತ್ತದೆ. ತನ್ನ ಮುಂದಿನ ದಿನಗಳು ಉತ್ತಮವಾಗುತ್ತದೆಎಂಬ ನಿರೀಕ್ಷೆಯಲ್ಲಿ ಆಸ್ಪತ್ರೆಯ ಮಂಚದಲ್ಲಿ ಮಲಗಿದ್ದಾರೆ. ಒಂದುಕಾಲಕ್ಕೆ ಹೇಗಿದ್ದವರು ಹೇಗಾದರು! ಇದನ್ನೇ ವಿಧಿ ನಿಯಮ ಎನ್ನುವುದು ಅಲ್ಲವೇ?





