ಸುಪ್ರೀಂ ವಿಚಾರಣೆ ಫೆ.15ರ ಕೋರ್ಟ್ ಹಿಂಸಾಚಾರಕ್ಕೆ ಸೀಮಿತ

ಹೊಸದಿಲ್ಲಿ,ಫೆ.22: ತನ್ನ ವಿಚಾರಣೆಯ ವ್ಯಾಪ್ತಿಯನ್ನು ತಾನು ವಿಸ್ತರಿಸುವುದಿಲ್ಲ ಮತ್ತು ಅದು ಫೆ.15ರ ಕೋರ್ಟ್ ಹಿಂಸಾಚಾರದ ಘಟನೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಸ್ಪಷ್ಟಪಡಿಸಿತು. ದೇಶದ್ರೋಹದ ಆರೋಪದಲ್ಲಿ ಬಂಧನದಲ್ಲಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ ಅವರನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲೆಂದು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಕರೆ ತಂದಿದ್ದ ಸಂದರ್ಭ ವಕೀಲರ ಗುಂಪೊಂದು ಜೆಎನ್‌ಯು ವಿದ್ಯಾರ್ಥಿಗಳು,ಶಿಕ್ಷಕರು ಮತ್ತು ಪತ್ರಕರ್ತರ ಮೇಲೆ ಹಲ್ಲೆಗಳನ್ನು ನಡೆಸಿತ್ತು.
ವಕೀಲರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಮತ್ತು ಅವರನ್ನು ಗೂಂಡಾಗಳು ಹಾಗೂ ಕ್ರಿಮಿನಲ್‌ಗಳೆಂದು ಬಣ್ಣಿಸಲಾಗುತ್ತಿರುವುದರಿಂದ ತನ್ನನ್ನೂ ಕಕ್ಷಿದಾರನಾಗಿ ಸೇರಿಸಬೇಕು ಎಂದು ಕೋರಿ ಕರ್ಕರಡೂಮಾ ಬಾರ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ ಮತ್ತು ಎ.ಎಂ.ಸಪ್ರೆ ಅವರ ಪೀಠವು, ಕ್ಷಮಿಸಿ..ಇತರ ಘಟನೆಗಳು ನಮಗೆ ಸಂಬಂಧಿಸಿದ್ದಲ್ಲ. ಫೆ.15ರಂದು ನಡೆದಿದ್ದ ಘಟನೆ ಮಾತ್ರ ನಮಗೆ ಸಂಬಂಧಿಸಿದೆ ಎಂದು ತಿಳಿಸಿತು.
ವಿಚಾರಣೆ ಸಂದರ್ಭ ಪೀಠವು ದಿಲ್ಲಿ ಪೊಲೀಸ್,ಬಾರ್ ಕೌನ್ಸಿಲ್ ಆಫ್ಇಂಡಿಯಾ,ದಿಲ್ಲಿ ಉಚ್ಚ ನ್ಯಾಯಾಲಯದ ರಿಜಿಸ್ಟ್ರಿ ಮತ್ತು ತಾನು ನೇಮಿಸಿದ್ದ ಆರು ವಕೀಲರ ಸಮಿತಿ ಸಲ್ಲಿಸಿರುವ ವಿವಿಧ ವರದಿಗಳನ್ನು ಪರಿಶೀಲಿಸಿತು.
ಆರೋಪ ಮತ್ತು ಪ್ರತ್ಯಾರೋಪಗಳಿದ್ದು,ವರದಿಗಳನ್ನು ವಿನಿಮಯಿಸಿಕೊಳ್ಳಬೇಕು. ಮಾ.10ರಂದು ವಿಚಾರಣೆಗೆ ಮುನ್ನ ಆಕ್ಷೇಪಣೆಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸಬೇಕು ಎಂದು ಪೀಠವು ನಿರ್ದೇಶ ನೀಡಿತು.







