ಫೆ.25ರಂದು ಮೂಡುಬಿದಿರೆಯಲ್ಲಿ ಭ್ರಷ್ಟಾಚಾರ ವಿರೋಧಿ ಅರಿವು ಕಾರ್ಯಕ್ರಮ

ಮೂಡುಬಿದಿರೆ:ವಿದ್ಯಾರ್ಥಿಗಳಲ್ಲಿ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಕುರಿತು ಅರಿವು ಮೂಡಿಸಲು ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ ಇದೇ 25ರಂದು ಅಪರಾಹ್ನ 2.45ಕ್ಕೆ ಮಹಾವೀರ ಕಾಲೇಜಿನಲ್ಲಿ ಮಾನವ ಹಕ್ಕು ಮತ್ತು ಮಹಿಳಾ ಹಕ್ಕು ಜಾಗೃತಿ ಕುರಿತು ಅರಿವು ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಸಿ. ನಾರಾಯಣ್ ತಿಳಿಸಿದ್ದಾರೆ. ಅವರು ಸೋಮವಾರ ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸರಕಾರಿ, ಶೈಕ್ಷಣಿಕ, ರಾಜಕೀಯ ಇನ್ನಿತರ ಸಾರ್ವಜನಿಕ ಹಾಗೂ ಖಾಸಗಿ ರಂಗದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಭ್ರಷ್ಟಾಚಾರಗಳು ಹೆಚ್ಚುತ್ತಿವೆ. ಬೇರೆ ಬೇರೆ ಕಾರಣಗಳಿಂದ ಅದನ್ನು ಪ್ರಶ್ನಿಸುವ ಅಥವಾ ವಿರೋಧಿಸುವವರ ಸಂಖ್ಯೆ ಕಡಿಮೆಯಾಗಿದೆ. ಈ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲು ಶಿಕ್ಷಣ ಸಂಸ್ಥೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ರಾಜ್ಯ ಮಾನವ ಹಕ್ಕುಗಳ ಆಯೋಗ ಸರಕಾರದ ಅನತಿಯಂತೆ ಕೆಲಸ ಮಾಡುತ್ತಿರುವುದರಿಂದ ದೂರುದಾರರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂಬ ಆರೋಪಗಳಿವೆ. ಈ ಆಯೋಗದ ಅಧ್ಯಕ್ಷರು ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರಿಂದ ನಮಗೆ ಬಂದ ದೂರುಗಳನ್ನು ಮುಂದಿನ ಕ್ರಮಕ್ಕಾಗಿ ಕೇಂದ್ರ ಮಾನವ ಹಕ್ಕು ಆಯೋಗಕ್ಕೆ ಕಳಿಸುತ್ತಿದ್ದೇವೆ ಎಂದರು. ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಉಷಾ ಎಸ್.ರಾಜ್, ಕಾರ್ಯದರ್ಶಿ ವಿಜಯ, ಸದಸ್ಯ ದಿನೇಶ್ ಉಪಸ್ಥಿತರಿದ್ದು.





