ಮಂಗಳೂರು : ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಜೀವನಮೌಲ್ಯ ಶಿಕ್ಷಣ ಕಾರ್ಯಗಾರ
ಮಂಗಳೂರು,ಫೆ.22: ನಗರದ ಕೆನರಾ ಕಾಲೇಜಿನಲ್ಲಿ ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಜೀವನಮೌಲ್ಯ ಶಿಕ್ಷಣ ಕಾರ್ಯಗಾರ ನಡೆಯಿತು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಸರಕಾರೇತರ ಸಂಸ್ಥೆ ರೆಸ್‌ಕ್ಯೂ ನ ಮುಖ್ಯ ಕಾರ್ಯ ನಿರ್ವಾಹಕ ಅಭಿಷೇಕ್ ಕ್ಲಿಫಡ್‌ರ್ ಜೇಕಬ್ ಭಾರತದಲ್ಲಿ ಇಂದು ವಿದ್ಯಾರ್ಥಿ ಸಮುದಾಯಕ್ಕೆ ಶಿಕ್ಷಣದ ಜೊತೆಯಲ್ಲಿ ಮೌಲ್ಯಧಾರಿತ ಚಿಂತನೆಗಳಿಗೆ ಅವಕಾಶವನ್ನು ನೀಡುವ ಅಗತ್ಯವಿದೆ. ಯುವಕರು ದೇಶದ ಆಸ್ತಿಯಾಗಿದ್ದು ಅವರನ್ನು ಸುಸಂಸ್ಕೃತರನ್ನಾಗಿಸಬೇಕಾಗಿದೆ. ಶಾಲಾಕಾಲೇಜು ಕಲಿಕೆಯ ಅವಧಿಯಲ್ಲಿ ಪ್ರೀತಿ ಪ್ರೇಮದ ಉನ್ಮಾದ ಸ್ಥಿತಿಯನ್ನು ತಲುಪದಂತೆ ಅರಿವು ನೀಡಬೇಕಾಗಿದೆ. ನಮ್ಮ ಯುವಪೀಳಿಗೆ ವಿವಿಧ ಅನಾಹುತಗಳಿಗೆ, ಅಪರಾಧಗಳಿಗೆ ಬಲಿಯಾಗುತ್ತಿದ್ದಾರೆ. ಮುಖ್ಯವಾಗಿ ಅನಾರೋಗ್ಯಕರ ಲೈಂಗಿಕಾಸಕ್ತಿ, ಅನೈತಿಕ ಸಂಬಂಧಗಳು, ವೈಜ್ಞಾನಿಕ ತಂತ್ರಜ್ಞಾನದ ಬಳಕೆಯಿಂದ ಭ್ರೂಣ ಪತ್ತೆ, ಅತ್ಯಾಚಾರ, ವೇಶ್ಯಾವಾಟಿಕೆ ಜಾಲ ಇತ್ಯಾದಿ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿ ಮನೋವಿಕಾರಕ್ಕೊಳಗಾಗಿ ತಪ್ಪು ದಾರಿಯಲ್ಲಿ ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳುವ ಮತ್ತು ಮಾದಕ ದ್ರವ್ಯ ಸೇವನೆಯಂತಹ ದುಶ್ಚಟಗಳಿಂದಾಗಿ, ಮಾರಣಾಂತಿಕ ರೋಗಗಳಿಗೆ ಬಲಿಯಾಗುತ್ತಿದ್ದು, ಏಡ್ಸ್‌ನಂತಹ ರೋಗಗಳಿಂದ ಬಳಲಿ ಖಿನ್ನತೆಗೊಳಗಾಗಿ ಆತ್ಮಹತ್ಯಗೆ ಶರಣಾಗುತ್ತಿದ್ದಾರೆ. ಇದನ್ನೆಲ್ಲಾ ತಪ್ಪಿಸಬೇಕಾದರೆ ಅವರಿಗೆ ನೈತಿಕ ಮೌಲ್ಯಗಳನ್ನು ರೂಡಿಸಿಕೊಳ್ಳುವಂತೆ ತಯಾರು ಮಾಡಬೇಕಾಗಿದೆ. ತನ್ಮೂಲಕ ಉತ್ತಮ ಮಾನವೀಯ ಸಂಬಂಧಗಳನ್ನು ಬಲಿಷ್ಠಗೊಳಿಸಬಹುದು. ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕಿ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ತೊಡಗುವಂತೆ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು. ಡಾ. ಝಯೋನ್ ಶರ್ಮ ಭ್ರೂಣಹತ್ಯೆಯ ಬಗ್ಗೆ ಸಚಿತ್ರವಾಗಿ ಉಪನ್ಯಾಸವಿತ್ತರು. ಕಾಲೇಜಿನ ಉಪಪ್ರಾಂಶುಪಾಲ ಡಾ. ಮನೋಹರ ಜೋಷಿ ಸ್ವಾಗತಿಸಿದರು. ಉಪನ್ಯಾಸಕಿ ಸುಷ್ಮಾ ವಂದಿಸಿದರು.





