ಜಗಳ ಬಿಡಿಸಲು ಬಂದ ತಾಯಿಯನ್ನೆ ಬಡಿದು ಕೊಂದ ಮೂರ್ಖ ಮಗ!

ಉತ್ತರ ಪ್ರದೇಶ: ಇಲ್ಲಿನ ಕುಶಿನಗರದಲ್ಲಿ ಮೂರ್ಖ ಮಗನೊಬ್ಬ ತನ್ನ ತಾಯಿಯನ್ನೇ ಹೊಡೆದುಕೊಂದಿದ್ದಾನೆ! ಕುಟುಂಬ ಜಗಳ ಈ ಹತ್ಯೆಗೆ ಕಾರಣವೆಂದು ಹೇಳಲಾಗುತ್ತಿದೆ. ಹತ್ಯಾರೋಪಿಯ ವಿರುದ್ಧ ಆತ ಪತ್ನಿಯೇ ಕೊಲೆ ಕೇಸು ದಾಖಲಿಸಿದ್ದಾರೆ.
ಕಸಯಾ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ದೇವಾ ಎಂಬವರ ಮಗ ಇಂದ್ರಜಿತ್ ತನ್ನ ಪತ್ನಿಯೊಂದಿಗೆ ಶನಿವಾರ ರಾತ್ರೆ ಜಗಳ ಮಾಡತೊಡಗಿದ್ದ. ಯಾವುದೋ ಮಾತಿಗೆ ಆತ ಹೆಂಡತಿಗೆ ಹೊಡೆಯ ತೊಡಗಿದಾಗ ಜಗಳ ಬಿಡಿಸಲು ಆತನ ತಾಯಿ ಬಂದು ಮಗನಿಗೆ ಬುದ್ಧಿವಾದ ಹೇಳತೊಡಗಿದರು. ಇದರಿಂದ ಇಂದ್ರಜಿತ್ ಕೋಪ ತಾರಕಕ್ಕೇರಿತ್ತು. ತಾಯಿಯನ್ನೇ ಹೊಡೆಯ ತೊಡಗಿದ. ಪ್ರಜ್ಞೆ ತಪ್ಪಿ ಅವರು ಕುಸಿದು ಬಿದ್ದರು. ಇದನ್ನುನೋಡಿ ಇಂದ್ರಜಿತ್ ಓಡಿಹೋಗಿದ್ದ.
ಪತ್ನಿ ನೆರೆಯವರ ಸಹಾಯದಿಂದ ಅತ್ತೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅತ್ತೆ ಮೃತರಾಗಿದ್ದರು. ಇಂದ್ರಜಿತ್‌ನ ಪತ್ನಿಯ ದೂರಿನ ಪ್ರಕಾರ ಆತನ ಮೇಲೆ ಕೇಸು ದಾಖಲಿಸಲಾಗಿದೆ ಎಂದು ಎಸ್ಸೈ ಓ.ಪಿ.ರಾಯ್ ತಿಳಿಸಿದ್ದಾರೆ.





