ಹೆಚ್ಚು ನಿರಾಶ್ರಿತರನ್ನು ಸ್ವೀಕರಿಸಲು ಮುಂದೆ ಬಂದ ಪೋರ್ಚುಗಲ್
ಕುಸಿಯುತ್ತಿರುವ ಜನಸಂಖ್ಯೆಯನ್ನು ಸರಿದೂಗಿಸುವ ಪ್ರಯತ್ನ

ಲಿಸ್ಬನ್ (ಪೋರ್ಚುಗಲ್), ಫೆ. 22: ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿರುವ ವಲಸಿಗರ ಸಮಸ್ಯೆಯನ್ನು ನಿಭಾಯಿಸಲು ಹೆಣಗುತ್ತಿರುವ ಐರೋಪ್ಯ ದೇಶಗಳ ಹೊರೆಯನ್ನು ಕಡಿಮೆ ಮಾಡಲು ಪೋರ್ಚುಗಲ್ ಮುಂದೆ ಬಂದಿದೆ. 10,000 ವಲಸಿಗರನ್ನು ಸ್ವೀಕರಿಸುವ ಕೊಡುಗೆಯನ್ನು ಅದು ಐರೋಪ್ಯ ದೇಶಗಳಿಗೆ ನೀಡಿದೆ.
ಆದರೆ, ಪೋರ್ಚುಗಲ್ ವಾಸ್ತವವಾಗಿ ಈ ಕೊಡುಗೆಯನ್ನು ನೀಡಿರುವುದು ತನ್ನ ದೇಶದ ಕುಸಿಯುತ್ತಿರುವ ಜನಸಂಖ್ಯೆಯನ್ನು ಸರಿದೂಗಿಸುವುದಕ್ಕಾಗಿ.
ವಲಸಿಗರು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಆಸ್ಟ್ರಿಯ, ಗ್ರೀಸ್, ಇಟಲಿ ಮತ್ತು ಸ್ವೀಡನ್ ದೇಶಗಳಿಗೆ ಪೋರ್ಚುಗಲ್ ಪ್ರಧಾನಿ ಆಂಟೋನಿಯೊ ಕೋಸ್ಟ ಕಳೆದ ವಾರ ಪತ್ರಗಳನ್ನು ಬರೆದಿದ್ದಾರೆ. ಐರೋಪ್ಯ ಒಕ್ಕೂಟದ ನಿರಾಶ್ರಿತ ಕೋಟ ವ್ಯವಸ್ಥೆಯ ಭಾಗವಾಗಿ ಈಗಾಗಲೇ ಸ್ವೀಕರಿಸಲು ಒಪ್ಪಿಕೊಂಡಿರುವ 4,500 ನಿರಾಶ್ರಿತರಿಗೆ ಹೆಚ್ಚುವರಿಯಾಗಿ, ಇನ್ನೂ 5,800 ನಿರಾಶ್ರಿತರನ್ನು ಸ್ವೀಕರಿಸಲು ಪೋರ್ಚುಗಲ್ ಸಿದ್ಧವಾಗಿದೆ ದೇಶ ಸಿದ್ಧವಿರುವುದಾಗಿ ಅವರು ಪತ್ರದಲ್ಲಿ ಹೇಳಿದ್ದಾರೆ.
ನಿರಾಶ್ರಿತರನ್ನು ತಡೆಯುವುದಕ್ಕಾಗಿ ಯುರೋಪ್ ತನ್ನ ಗಡಿಗಳನ್ನು ಮುಚ್ಚಬೇಕು ಎನ್ನುವ ಸಲಹೆಗೆ ಪೋರ್ಚುಗಲ್ ವಿರುದ್ಧವಾಗಿದೆ ಎಂದು ಕೋಸ್ಟ ಇತ್ತೀಚೆಗೆ ಬ್ರಸೆಲ್ಸ್‌ನಲ್ಲಿ ಹೇಳಿದ್ದರು. ಈ ನಿಟ್ಟಿನಲ್ಲಿ ಪೋರ್ಚುಗಲ್ ಪೂರ್ವನಿದರ್ಶನ ಹಾಕಿಕೊಡುತ್ತದೆ ಎಂಬುದಾಗಿಯೂ ಅವರು ಹೇಳಿದ್ದರು.
ವಲಸಿಗರಿಗೆ ಪುನರ್ವಸತಿ ಕಲ್ಪಿಸುವ ಸಂಪೂರ್ಣ ಹೊಣೆಯನ್ನು ಜರ್ಮನಿಯ ಮೇಲೆಯೇ ಬಿಡುವುದ ಸರಿಯಲ್ಲ ಎಂದು ಅವರು ಈ ತಿಂಗಳ ಆರಂಭದಲ್ಲಿ ಬರ್ಲಿನ್‌ಗೆ ನೀಡಿದ್ದ ಭೇಟಿಯ ವೇಳೆ ಹೇಳಿದ್ದರು.
ಜರ್ಮನಿ ಕಳೆದ ವರ್ಷವೊಂದರಲ್ಲೇ 10 ಲಕ್ಷಕ್ಕೂ ಅಧಿಕ ನಿರಾಶ್ರಿತರನ್ನು ಸ್ವೀಕರಿಸಿತ್ತು.
ಆದರೆ, ನಿರಾಶ್ರಿತರ ಮೊದಲ ಆಯ್ಕೆ ಪೋರ್ಚುಗಲ್ ಆಗಿಲ್ಲ. ಅವರು ಸ್ವೀಡನ್ ಮತ್ತು ಡೆನ್ಮಾರ್ಕ್ ಮುಂತಾದ ಉತ್ತರದ ಐರೋಪ್ಯ ದೇಶಗಳಲ್ಲಿ ಪುನರ್ವಸತಿ ಬಯಸುತ್ತಿದ್ದಾರೆ. ಆದರೆ, ಈ ದೇಶಗಳು ವಲಸಿಗರ ಪ್ರವಾಹವನ್ನು ನಿಯಂತ್ರಿಸುವುದಕ್ಕಾಗಿ ತಮ್ಮ ಗಡಿಗಳಲ್ಲಿ ನಿರ್ಬಂಧಗಳನ್ನು ಹೇರುತ್ತಿವೆ.
ನಿರ್ಜನ ಪಟ್ಟಣಗಳು
ನಿರಾಶ್ರಿತರ ಸ್ವೀಕಾರದಿಂದ ಜನರೇ ಇಲ್ಲದ ದೇಶದ ಹಲವು ಭಾಗಗಳಿಗೆ ಪ್ರಯೋಜನವಾಗುತ್ತದೆ ಎಂದು ಪೋರ್ಚುಗೀಸ್ ನಿರಾಶ್ರಿತ ಮಂಡಳಿಯ ಮುಖ್ಯಸ್ಥೆ ತೆರೇಸಾ ಟಿಟೊ ಮೊರಾಯಿಸ್ ಹೇಳುತ್ತಾರೆ.
‘‘ಭಾರೀ ಸಂಖ್ಯೆಯ ಪೋರ್ಚುಗೀಸರು ಹೊರಗೆ ವಲಸೆ ಹೋಗಿದ್ದಾರೆ ಹಾಗೂ ಹಲವು ವಲಯಗಳಿಗೆ ಜೀವಂತಿಕೆ ಮರಳಬೇಕಾಗಿದೆ’’ ಎಂದರು.
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ತೀವ್ರ ದಾಳಿಗೆ ಒಳಗಾದ ಪೋರ್ಚುಗಲ್‌ನಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾದಾಗ ಯುವ ಜನರು ಅವಕಾಶಗಳನ್ನು ಅರಸಿ ವಿದೇಶಗಳಿಗೆ ಪ್ರಯಾಣಿಸಿದ್ದಾರೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು ಐದು ಲಕ್ಷ ಪೋರ್ಚುಗೀಸರು ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ದೇಶ ತೊರೆದಿದ್ದಾರೆ.
ಜನನ ದರ ಕುಸಿತ
ಪೋರ್ಚುಗಲ್‌ನ ಜನನ ದರವೂ ಐರೋಪ್ಯ ಒಕ್ಕೂಟದಲ್ಲೇ ಅತ್ಯಂತ ಕಡಿಮೆಯಾಗಿದೆ. ಜನನ ಪ್ರಮಾಣದ ಕುಸಿತ ಇದೇ ದರದಲ್ಲಿ ಮುಂದುವರಿದರೆ 2060ರ ವೇಳೆಗೆ ಪೋರ್ಚುಗಲ್ ತನ್ನ ಜನಸಂಖ್ಯೆಯ 20 ಶೇಕಡದಷ್ಟನ್ನು ಕಳೆದುಕೊಳ್ಳಲಿದೆ. ಅಂದರೆ, ಜನಸಂಖ್ಯೆಯು ಈಗಿನ 1.05 ಕೋಟಿಯಿಂದ 86 ಲಕ್ಷಕ್ಕೆ ಕುಸಿಯಲಿದೆ ಎಂದು ಪೋರ್ಚುಗಲ್‌ನ ರಾಷ್ಟ್ರೀಯ ಅಂಕಿಸಂಖ್ಯೆ ಸಂಸ್ಥೆ ಹೇಳಿದೆ.







