ಸರ್ವಪಕ್ಷ ಸಭೆ ಕೇವಲ ‘‘ಔಪಚಾರಿಕತೆ’’ ಎಂದ ಪ್ರತಿಪಕ್ಷದಿಂದ ಬಜೆಟ್ ಅಧಿವೇಶನದ ಕೋಲಾಹಲಪೂರ್ಣ ಆರಂಭದ ಸಂಕೇತ

ಹೊಸದಿಲ್ಲಿ,ಫೆ.22: ಮುಂಗಡಪತ್ರ ಅಧಿವೇಶನ ಕೋಲಾಹಲಪೂರ್ಣವಾಗಿಯೇ ಆರಂಭಗೊಳ್ಳುವ ಸಂಕೇತಗಳು ಸೋಮವಾರ ಇಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಕಾಣಿಸಿಕೊಂಡಿವೆ. ಜೆಎನ್‌ಯು ವಿವಾದ ಸೇರಿದಂತೆ ಎಲ್ಲ ವಿಷಯಗಳ ಚರ್ಚೆಗೆ ತಾನು ಸಿದ್ಧ ಎಂದು ಸರಕಾರವು ಹೇಳಿತಾದರೂ ಅದು ‘‘ಕಲಾಪ ವ್ಯತ್ಯಯದ ಕಾರ್ಯಸೂಚಿಯನ್ನು ರೂಪಿಸುತ್ತಿದೆ’’ಎಂದು ಪ್ರತಿಪಕ್ಷ ಆಪಾದಿಸಿತು.
ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಕರೆದಿದ್ದ ಸರ್ವಪಕ್ಷ ಸಭೆಯನ್ನು ಕೇವಲ ‘‘ಔಪಚಾರಿಕತೆ’’ಎಂದು ತಳ್ಳಿಹಾಕಿದ ಪ್ರತಿಪಕ್ಷ ನಾಯಕರು ಪ್ರಧಾನಿ ಮತ್ತು ಬಿಜೆಪಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದಕ್ಕಾಗಿ ಒಬ್ಬನೇ ಒಬ್ಬ ನಾಯಕನ ವಿರುದ್ಧ ಕ್ರಮವನ್ನು ಕೈಗೊಂಡಿಲ್ಲ ಎಂದು ವಿಷಾದಿಸಿದರು. ತನ್ಮೂಲಕ ಸದನವನ್ನು ಸುಗಮವಾಗಿ ನಡೆಸಲು ಚೆಂಡನ್ನು ಸರಕಾರದ ಅಂಗಳಕ್ಕೆ ಹಾಕಿದರು.
ಅಧಿವೇಶನದ ಮೊದಲ ದಿನವಾದ ಫೆ.24ರಂದು ರಾಜ್ಯಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮೊದಲ ಝಟಾಪಟಿ ನಡೆಯುವ ನಿರೀಕ್ಷೆಯಿದೆ. ಅಂದು ಜೆಎನ್‌ಯು ವಿವಾದ ಚರ್ಚೆಗೆ ಬರುವ ಸಾಧ್ಯತೆಯಿದೆ. ಜೆಎನ್‌ಯು ವಿವಾದದಲ್ಲಿ ಸರಕಾರವನ್ನು ಪೇಚಿಗೆ ಸಿಲುಕಿಸಲು ಪ್ರತಿಪಕ್ಷ ಸನ್ನದ್ಧವಾಗಿದ್ದರೆ, ಪಕ್ಷದ ನಾಯಕರೋರ್ವರು ಹೇಳಿದಂತೆ ಅದನ್ನು ‘‘ದೇಶಭಕ್ತರು ಮತ್ತು ದೇಶವಿರೋಧಿಗಳ’’ನಡುವಿನ ಚರ್ಚೆಯನ್ನಾಗಿಸುವ ಮೂಲಕ ತಾನು ಲಾಭವೆತ್ತಬಹುದು ಎಂದು ಬಿಜೆಪಿಯು ಭಾವಿಸಿದೆ.
ಅಧಿವೇಶನದ ಪೂರ್ವಾರ್ಧದಲ್ಲಿ ಯಾವುದೇ ಪ್ರಮುಖ ಮಸೂದೆಯ ಅಂಗೀಕಾರಕ್ಕೆ ಪ್ರತಿಪಕ್ಷವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಸಾರ್ವತ್ರಿಕ ಸಹಮತವಿರುವ ಮಸೂದೆಗಳ ಅಂಗೀಕಾರಕ್ಕೆ ಮಾತ್ರ ಪ್ರತಿಪಕ್ಷವು ಅವಕಾಶ ನೀಡಲಿದೆ ಎಂದಿದ್ದಾರೆ.
ಅಧಿವೇಶನದ ಉತ್ತರಾರ್ಧದಲ್ಲಿ ಜಿಎಸ್‌ಟಿ ಮಸೂದೆ ಅಂಗೀಕಾರವಾಗಬಹುದೇ ಎಂಬ ಪ್ರಶ್ನೆಗೆ ನೇರ ಉತ್ತರವನ್ನು ನೀಡುವುದರಿಂದ ನುಣುಚಿಕೊಂಡ ಖರ್ಗೆ,ಆ ವೇಳೆಯಲ್ಲಿ ಆ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.
ಜೆಎನ್‌ಯು ವಿವಾದದ ಕುರಿತು ಶೀಘ್ರವೇ ಚರ್ಚೆ ನಡೆಯಬೇಕು ಎಂದು ಪ್ರತಿಪಕ್ಷ ಮತ್ತು ಬಿಜೆಪಿ ನಾಯಕರು ಸಭೆಯಲ್ಲಿ ಒತ್ತಾಯಿಸಿದರು.
ಜರ್ಮನಿಯಲ್ಲಿ ನಿರಂಕುಶ ಪ್ರಭುತ್ವಕ್ಕೆ ನಾಂದಿ ಹಾಡಿದ್ದ ಸ್ಥಿತಿಯೇ ಇಂದು ದೇಶದಲ್ಲಿದೆ ಎಂದು ಕಿಡಿ ಕಾರಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು, ಅಧಿವೇಶನವು ಆರಂಭಗೊಳ್ಳುವ ಮೊದಲೇ ಸಂಸತ್ತನ್ನು ವ್ಯತ್ಯಯಗೊಳಿಸುವ ಕಾರ್ಯಸೂಚಿಯನ್ನು ಸರಕಾರವು ರೂಪಿಸುತ್ತಿದೆ. ಬಿಜೆಪಿಯ ಈ ಅಜೆಂಡಾವನ್ನು ನಾವು ಹಿಂದಿನ ಮೂರು-ನಾಲ್ಕು ಅಧಿವೇಶನಗಳಲ್ಲಿ ಕಂಡಿದ್ದೇವೆ ಎಂದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಯ್ಡು ಅವರು, ಸಭೆಯು ಅತ್ಯಂತ ಧನಾತ್ಮಕವಾಗಿತ್ತು ಮತ್ತು ಪಕ್ಷಗಳು ಸಂಸತ್ತಿನಲ್ಲಿ ಸುಗಮ ಕಲಾಪದ ಪರವಾಗಿವೆ ಎಂದು ತಿಳಿಸಿದರು.
ಪ್ರತಿ ಬಾರಿಯೂ ಅದೇ ಕಥೆ
ಸಂಸತ್ತಿನ ಮುಂಗಡಪತ್ರ ಅಧಿವೇಶನದ ಸುಗಮ ನಿರ್ವಹಣೆಯನ್ನು ಬಯಸಿ ಪ್ರಧಾನಿ ನರೇಂದ್ರ ಮೋದಿಯವರು ಫೆ.15ರಂದು ಪ್ರತಿಪಕ್ಷ ನಾಯಕರೊಂದಿಗೆ ಮಾತುಕತೆಗಳನ್ನು ನಡೆಸಿದ್ದಾರೆ. ಶನಿವಾರ ರಾಜ್ಯಸಭೆಯ ಸಭಾಪತಿ ಹಾಮಿದ್ ಅನ್ಸಾರಿ ಅವರೂ ಸರ್ವಪಕ್ಷ ಸಭೆಯನ್ನು ಕರೆದಿದ್ದರು. ಜೆಎನ್‌ಯು ವಿವಾದ ಸೇರಿದಂತೆ ಹಲವಾರು ವಿಷಯಗಳ ಚರ್ಚೆಗೆ ಪ್ರತಿಪಕ್ಷವು ಒತ್ತಾಯಿಸಿದ್ದು, ಅದಕ್ಕೆ ಆದ್ಯತೆ ನೀಡುವುದಾಗಿ ಎನ್‌ಡಿಎ ಸರಕಾರವೂ ಒಪ್ಪಿಕೊಂಡಿದೆ. ಇಷ್ಟಾದ ಬಳಿಕ ಕಲಾಪಗಳು ಸುಗಮವಾಗಿ ನಡೆಯಬೇಕು ಮತ್ತು ಪ್ರಮುಖ ಮಸೂದೆಗಳು ಅಂಗೀಕಾರಗೊಳ್ಳಬೇಕು ಎಂದು ಇತ್ತಂಡಗಳೂ ಒಪ್ಪಿಕೊಂಡಿವೆ.
ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಇಂತಹುದೊಂದು ವ್ಯರ್ಥ ಕಸರತ್ತು ನಡೆಯುತ್ತಲೇ ಇರುತ್ತದೆ. ಈ ಸಭೆಗಳಲ್ಲಿ ಪ್ರತಿಪಕ್ಷ ತನ್ನ ಎಲ್ಲ ಸಹಕಾರದ ಭರವಸೆಯನ್ನು ನೀಡುತ್ತದೆ ಮತ್ತು ಸಂಸತ್ತು ಆರಂಭಗೊಂಡಾಗ ನಡೆಯುವುದೇ ಬೇರೆಯೇ ಆಗಿರುತ್ತದೆ.







