ಉಡುಪಿ : ಫೆ.28-29: ಭರತಮುನಿ ಜಯಂತ್ಯುತ್ಸವ
ಉಡುಪಿ, ಫೆ.22: ಪರ್ಯಾಯ ಪೇಜಾವರ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನ ವತಿಯಿಂದ ಭರತಮುನಿ ಜಯಂತ್ಯುತ್ಸವ ಹಾಗೂ ರಜತ ಸಂಭ್ರಮದ ಸಮಾರೋಪ ಸಮಾರಂಭವನ್ನು ಫೆ.28 ಮತ್ತು 29ರಂದು ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಸಂಸ್ಥೆಯ ನೃತ್ಯಗುರು ವಿದುಷಿ ವೀಣಾ ಎಂ. ಸಾಮಗ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಫೆ.28ರಂದು ಬೆಳಗ್ಗೆ 9ಗಂಟೆಗೆ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿದುಷಿ ಕಮಲಾ ಭಟ್, ವಿದುಷಿ ಪ್ರತಿಭಾ ಸಾಮಗ, ಸುರೇಶ್ ಅತ್ತಾವರ, ಸಿಂಗಾರಮಣಿ ಪದ್ಮಿನಿ ಶ್ರೀಧರ್, ಆರ್.ಕಣ್ಣನ್, ಪುಲಕೇಶಿ ಕಸ್ತೂರಿ ಅವರಿಗೆ ಱಭರತ ಪ್ರಶಸ್ತಿೞಪ್ರದಾನ ಮಾಡಲಾಗುವುದು. ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ವೇಣು ವಾದನ, ಭರತ ನಾಟ್ಯ ಕಾರ್ಯಕ್ರಮ, ಗುರು ಸಂಸ್ಮರಣೆ ನಡೆಯಲಿದೆ. ಫೆ.29ರಂದು ಸಂಜೆ 4ಗಂಟೆಗೆ ನಡೆಯುವ ರಜತ ಸಂಭ್ರಮದ ಸಮಾರೋಪವನ್ನು ಪೇಜಾವರ ಶ್ರೀ ಉದ್ಘಾಟಿಸುವರು. ನಂತರ ತರಂಗೋತ್ಸವ, ನೃತ್ಯವೈವಿಧ್ಯ ಕಾರ್ಯಕ್ರಮಗಳು ಜರಗಲಿವೆ.
ಸುದ್ದಿಗೋಷ್ಟಿಯಲ್ಲಿ ಸಂಚಾಲಕ ಮುರಳೀಧರ ಸಾಮಗ ಉಪಸ್ಥಿತರಿದ್ದರು.





