ಪ್ರಧಾನಿಯ ಹತಾಶೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲದ ಮತ್ತು ಬಹುತ್ವವನ್ನು ನಾಶ ಮಾಡುವ ಗುಪ್ತ ಕಾರ್ಯಸೂಚಿ ಹೊಂದಿರುವ ಸಂಘಟನೆಗೆ ಸೇರಿದ ವ್ಯಕ್ತಿ ಪ್ರಧಾನಿಯಾದರೆ ಏನಾಗುತ್ತದೆ ಎಂಬುದಕ್ಕೆ ನಮ್ಮ ಭಾರತ ದೇಶವೇ ಪ್ರತ್ಯಕ್ಷ ಉದಾಹರಣೆಯಾಗಿದೆ. ಜನತೆಗೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಲಾಗದ ನರೇಂದ್ರ ಮೋದಿ ಅವರ ಕೈಯಲ್ಲಿ ಸಿಕ್ಕಿ ದೇಶ ವಿಲಿವಿಲಿ ಒದ್ದಾಡುತ್ತಿದೆ. ಜವಾಹರಲಾಲ್ ನೆಹರೂ, ಲಾಲ್‌ಬಹುದ್ದೂರ್ ಶಾಸ್ತ್ರಿ, ವಿ.ಪಿ. ಸಿಂಗ್, ಐ.ಕೆ. ಗುಜ್ರಾಲ್‌ರತಂಹ ಮುತ್ಸದ್ದಿಗಳು ನಾಯಕತ್ವ ವಹಿಸಿದ್ದ ದೇಶವಿದು. ಇಂತಹ ವೈವಿಧ್ಯಮಯ ದೇಶ ಆರೆಸ್ಸೆಸ್ ಪ್ರಚಾರಕರೊಬ್ಬರ ಕೈಗೆ ಸಿಲುಕಿದೆ. ಚುನಾವಣೆಯಲ್ಲಿ ಮತಹಾಕಿದ ಶೇ.30ರಷ್ಟು ಜನರು ಕೂಡಾ ತಿರುಗಿ ಬೀಳುತ್ತಿದ್ದಾರೆ. ಇದರಿಂದ ಹತಾಶೆಗೊಂಡ ಮೋದಿ ಅವರು ‘‘ತಮ್ಮ ಸರಕಾರದ ಪದಚ್ಯುತಿಗೆ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಪ್ರತಿಪಕ್ಷಗಳು ಯತ್ನಿಸುತ್ತಿವೆ’’ ಎಂದು ಅರಚಾಡುತ್ತಿದ್ದಾರೆ.
ಒಡಿಶಾದಲ್ಲಿ ರವಿವಾರ ಮಾತನಾಡಿದ ಮೋದಿ ಅವರು ಚಹಾ ಮಾರಾಟ ಮಾಡುವ ತಾನು ಪ್ರಧಾನಿಯಾಗಿರುವುದನ್ನು ಸಹಿಸಲಾಗುತ್ತಿಲ್ಲ ಎಂದು ಹೇಳಿ ಜನರ ಸಹಾನುಭೂತಿ ಗಳಿಸಲು ಯತ್ನಿಸಿದ್ದಾರೆ. ಎನ್‌ಜಿಒಗಳ ಮೇಲಿನ ಮೋದಿ ಸಿಟ್ಟು ಇತ್ತೀಚಿನದ್ದಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರು ನಡೆಸಿದ ನಕಲಿ ಎನ್‌ಕೌಂಟರ್‌ಗಳು ಮತ್ತು ಹತ್ಯಾಕಾಂಡಗಳ ವಿರುದ್ಧ ಕೆಲ ಸ್ವಯಂ ಸೇವಾ ಸಂಸ್ಥೆಗಳು ಜನಜಾಗೃತಿ ಮೂಡಿಸಿದ್ದವು. ಟೀಸ್ತಾ ಸೆಟಲ್ವಾಡ್ ಅವರಂಥವರು ನ್ಯಾಯಾಲಯಕ್ಕೂ ಹೋಗಿದ್ದರು. ಅಂತಲೆ ಟೀಸ್ತಾ ಅವರಿಗೆ ಮೋದಿ ನಾನಾ ಚಿತ್ರಹಿಂಸೆಗಳನ್ನು ನೀಡಿದರು. ಕಾರ್ಪೊರೇಟ್ ಕಂಪೆನಿಗಳ ಕೃಪೆಯಿಂದ ರಾಷ್ಟ್ರ ರಾಜಕಾರಣಕ್ಕೆ ಬಂದು ಪ್ರಧಾನಿಯಾಗಿ ಎರಡು ವರ್ಷ ಅಧಿಕಾರ ನಡೆಸಿದ ಮೋದಿ ಅವರು ತನಗೆ ಎದುರಾಳಿಗಳೇ ಇಲ್ಲವೆಂದು ದುರಹಂಕಾರದಿಂದ ಬೀಗುತ್ತಿದ್ದರು. ಆರಂಭದಲ್ಲಿ ಅವರಿಗೆ ವಿರೋಧಿಗಳು ಇರಲಿಲ್ಲ. ಆದರೆ ಯಾವಾಗ ಆಡಳಿತ ಹಳಿತಪ್ಪತೊಡಗಿತೋ ಆವಾಗ ಜನರಿಂದ ಪ್ರತಿರೋಧ ವ್ಯಕ್ತವಾಗತೊಡಗಿತು. ಬೆಲೆಯೇರಿಕೆಯನ್ನು ನಿಯಂತ್ರಿಸುವಲ್ಲಿ ಸರಕಾರ ವಿಫಲಗೊಂಡಿತು. ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿಲ್ಲ. ವಿದೇಶದ ಕಪ್ಪುಹಣ ಭಾರತಕ್ಕೆ ಬರಲಿಲ್ಲ. ಈ ವೈಫಲ್ಯಗಳ ಜೊತಗೆ ಶೈಕ್ಷಣಿಕ ಕ್ಷೇತ್ರವನ್ನು ನಿಯಂತ್ರಿಸಲು ಹೋಗಿ ಸರಕಾರ ಇಕ್ಕಟ್ಟಿಗೆ ಸಿಲುಕಿದೆ. ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ದೇಶ ದ್ರೋಹಿಗಳನ್ನು ಸೃಷ್ಟಿಸಲು ಮೋದಿ ಸರಕಾರ ಮುಂದಾಯಿತು. ಆದರೆ, ಈ ತಂತ್ರ ತಿರುಗುಬಾಣವಾಯಿತು. ಇದರಿಂದ ಮೋದಿ ಮತ್ತು ಅವರ ಪರಿವಾರ ದವರು ಹತಾಶೆಗೊಂಡಿದ್ದಾರೆ. ಸೋಮವಾರ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಮೋದಿ ಭಾಷಣ ಮಾಡುವಾಗ ವೇಮುಲಾ ಹತ್ಯೆ ಮತ್ತು ಜೆಎನ್‌ಯು ಘಟನೆ ಖಂಡಿಸಿ ಕೆಲ ವಿದ್ಯಾರ್ಥಿಗಳು ಘೋಷಣೆ ಹಾಕಿದ್ದಾರೆ. ಈ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ಮಾಡಿದ್ದಾರೆ. ಭಿನ್ನಮತವನ್ನು ಎಂದಿಗೂ ಸಹಿಸದ ಮೋದಿ ಅವರು ಪಕ್ಷದೊಳಗೆ ಅಡ್ವಾಣಿಯವರ ಬಾಯಿ ಮುಚ್ಚಿಸಿದಂತೆ ದೇಶದ ಬಾಯಿ ಮುಚ್ಚಿಸಲು ಹೋಗಿ ಅಪ ಹಾಸ್ಯಕ್ಕಿಡಾ ಗುತ್ತಿದ್ದಾರೆ. ಮೋದಿ ಹೋದಲ್ಲೆಲ್ಲ ಧಿಕ್ಕಾರದ ಘೋಷಣೆಗಳು ಕೇಳಿಸುತ್ತಿವೆ. ಇತ್ತೀಚೆಗೆ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲೂ ಕೂಡಾ ಪ್ರಧಾನಿ ಧಿಕ್ಕಾರದ ಘೋಷಣೆಯನ್ನು ಎದುರಿಸಬೇಕಾಯಿತು. ಇಂದಿನಿಂದ ಸಂಸತ್ತಿನ ಅಧಿವೇಶನ ಆರಂಭವಾಗಲಿದೆ. ಸಂಸತ್ ಅಧಿವೇಶನ ದಲ್ಲೂ ಕೂಡಾ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ, ಜೆಎನ್‌ಯು ವಿವಾದಗಳು ಪ್ರತಿಧ್ವನಿ ಸಲಿವೆ. ಹೀಗಾಗಿ ಪ್ರಧಾನಿ ಮೋದಿ ಗಲಿಬಿಲಿ ಗೊಂಡಿದ್ದಾರೆ. ಗುಜರಾತ್‌ನಲ್ಲಿ ಅವರು ಈ ಹಿಂದೆ ನಡೆಸಿದ ಆಡಳಿತ ವೈಖರಿ ಕೂಡಾ ಭಿನ್ನವಾಗಿರಲಿಲ್ಲ. ಆದರೂ ಕೂಡಾ ರಾಷ್ಟ್ರದ ಶೇ.30 ರಷ್ಟು ಜನ ಮೋದಿ ಅವರಿಗೆ ರಾಷ್ಟ್ರ ನಡೆಸುವ ಒಂದು ಅವಕಾಶ ನೀಡಿದರು. ಈ ಅವಕಾಶವನ್ನು ಬಳಸಿಕೊಂಡು ಸಂವಿಧಾನ ಬದ್ಧವಾದ ಉತ್ತಮ ಆಡಳಿತ ನೀಡಿದ್ದರೆ ಜನ ಅವರ ಹಿಂದಿನ ತಪ್ಪುಗಳನ್ನು ಕ್ಷಮಿಸುತ್ತಿದ್ದರು. ಆದರೆ ಸಂವಿಧಾನವನ್ನು ಬದಿಗೊತ್ತಿ ಆರೆಸ್ಸೆಸ್‌ನ ವಿಭಜನಕಾರಿ ಕಾರ್ಯಸೂಚಿಯನ್ನು ಜಾರಿಗೆ ತರಲು ಹೊರಟಿರುವ ಮೋದಿ ಅವರು ತಮ್ಮ ಸುತ್ತ ಬಿಕ್ಕಟ್ಟಿನ ಕಂದಕಗಳನ್ನು ತೋಡಿಕೊಂಡಿದ್ದಾರೆ. ಮೋದಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ತನ್ನ ಕಾರ್ಯಸೂಚಿಯನ್ನು ಜಾರಿಗೆ ತರಲು ಕಾರ್ಯೋನ್ಮುಖವಾದ ಸಂಘಪರಿವಾರ ಮರುಮತಾಂತರದ ಹುಯಿಲೆಬ್ಬಿಸಿತು. ಆನಂತರ ಗೋಹತ್ಯೆ ನಿಷೇಧದ ಗೊಂದಲ ಎಬ್ಬಿಸಿತು. 2015ರ ಸೆಪ್ಟಂಬರ್ 28ರಂದು ಉತ್ತರಪ್ರದೇಶದ ದಾದ್ರಿ ಗ್ರಾಮದಲ್ಲಿ ದನದ ಮಾಂಸ ಬಚ್ಚಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ಮುಹಮ್ಮದ್ ಅಖ್ಲಾಕ್ ಎಂಬ ಅಮಾಯಕ ವ್ಯಕ್ತಿಯನ್ನು ಸಂಘಪರಿವಾರದ ಗೂಂಡಾಗಳು ಕೊಚ್ಚಿಹಾಕಿದರು. ಇದು ಅಲ್ಲಿಗೆ ನಿಲ್ಲಲಿಲ್ಲ. ಮತ್ತೆ ಬೇರೆಕಡೆ ಪುನರಾವರ್ತನೆಯಾಯಿತು.
ಈ ಹತ್ಯೆಯನ್ನು ಸಮರ್ಥಿಸಿ ಕೇಂದ್ರ ಸಚಿವರಾದ ನಿರಂಜನಜ್ಯೋತಿ, ರಮೇಶ್ ಶರ್ಮಾ, ಬಿಜೆಪಿ ಸಂಸದರಾದ ಯೋಗಿ ಆದಿತ್ಯನಾಥ, ಸಾಕ್ಷಿ ಮಹಾರಾಜ್‌ರಂಥವರು ಹೇಳಿಕೆ ನೀಡಿದರು. ಇದರ ಬೆನ್ನಲ್ಲೇ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದಲಿತ ಪ್ರತಿಭೆಗಳನ್ನು ಚಿವುಟಿಹಾಕುವ ಹುನ್ನಾರ ನಡೆಯಿತು. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ಆತ್ಮಹತ್ಯೆ ಪ್ರಕರಣ ನಡೆಯಿತು. ಈ ಪ್ರಕರಣವನ್ನು ಮುಚ್ಚಿಹಾಕಲು ದಿಲ್ಲಿಯ ಜೆಎನ್‌ಯುನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿಯನ್ನು ಸೋಲಿಸಿ ಗೆದ್ದುಬಂದಿದ್ದ ಎಐಎಸ್‌ಎಫ್ ನಾಯಕ ಕನ್ಹಯ್ಯಾ ಕುಮಾರ್‌ರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಯಿತು. ಆಗ ಭೂಗತರಾಗಿದ್ದ ಇನ್ನೋರ್ವ ಎಡಪಂಥೀಯ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್, ಇಂದು ಪ್ರತ್ಯಕ್ಷರಾಗಿ ತಮ್ಮನ್ನು ಬಂಧಿಸುವಂತೆ ಸರಕಾರಕ್ಕೆ ಸವಾಲು ಹಾಕಿದ್ದಾರೆ. ಈಗ ಬಿಕ್ಕಟ್ಟಿನ ಸುಲಿಗೆ ಸಿಲುಕಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿಷ್ಠೆ ಸಂವಿಧಾನಕ್ಕೋ ಅಥವಾ ಸಂಘಪರಿವಾರಕ್ಕೋ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ.







