ನಾವು ಮರೆತ ಪಾಠ
ಅಡಾಲ್ಫ್ ಹಿಟ್ಲರ್ ಅಧಿಕಾರ ಗಳಿಸಿದ ನಾಲ್ಕು ವಾರಗಳ ನಂತರ ಅಂದರೆ 1933, ಫೆಬ್ರವರಿ 27ರಂದು ಜರ್ಮನಿಯ ಸಂಸತ್ತನ್ನು ಹೊಂದಿದ್ದ ರಿಶ್ ಟ್ಯಾಗ್ ಕಟ್ಟಡ ಬೆಂಕಿಗಾಹುತಿಯಾಯಿತು. ಮಾನಸಿಕ ಅಸ್ವಸ್ಥ, ನಿರುದ್ಯೋಗಿ, ಇಟ್ಟಿಗೆಯ ಕೆಲಸ ಮಾಡುವವನಾಗಿದ್ದ ಡಚ್ ಕಮ್ಯುನಿಸ್ಟ್ ವ್ಯಕ್ತಿ ಮರಿನಸ್ ವಾನ್ ಡೆರ್ ಲುಬೆಯನ್ನು ಬೆಂಕಿ ಹಚ್ಚಿದ ಮತ್ತು ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದ ಆರೋಪದಡಿ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆತ ತಪ್ಪಿತಸ್ಥನೆಂದು ಸಾಬೀತಾಗಿ ಆತನನ್ನು ಮರಣ ದಂಡನೆಗೆ ಗುರಿಪಡಿಸಲಾಯಿತು. ಇದೊಂದು ಎಡಪಂಥೀಯರ ಪಿತೂರಿ ಎಂದು ಆರೋಪಿಸಿದ ಹಿಟ್ಲರ್, 86ರ ಹರೆಯದ ಅಧ್ಯಕ್ಷ ಪೌಲ್ ವಾನ್ ಹಿಂಡನ್ ಬರ್ಗ್ ಅವರನ್ನು ರಿಶ್ ಟ್ಯಾಗ್ ಬೆಂಕಿ ಒಪ್ಪಂದಕ್ಕೆ ಸಹಿ ಮಾಡುವಂತೆ ಒತ್ತಡ ಹೇರಿದ. ಈ ಒಪ್ಪಂದ ಹೆಬಿಯಸ್ ಕೋರ್ಪಸ್ (ಕಾನೂನಿಗೆ ವಿರುದ್ಧವಾಗಿ ಬಂಧಿಸಲ್ಪಟ್ಟ ವ್ಯಕ್ತಿಯನ್ನು ಬಿಡುಗಡೆ ಗೊಳಿಸುವಂತೆ ಸೂಚಿಸುವ ಆಜ್ಞಾಪತ್ರ), ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮದ ಹಕ್ಕನ್ನು, ಮುಕ್ತ ಒಡನಾಟದ ಹಕ್ಕು ಮತ್ತು ಸಾರ್ವಜನಿಕ ಸಭೆ ನಡೆಸುವ ಹಕ್ಕನ್ನು ವಜಾಗೊಳಿಸಿತ್ತು. ಸರಕಾರಕ್ಕೆ ನಾಗರಿಕರ ಪತ್ರಗಳನ್ನು ತೆರೆಯಲು ಮತ್ತು ಅವರ ದೂರವಾಣಿಗಳನ್ನು ಕದ್ದಾಲಿಸಲು ಈ ಒಪ್ಪಂದ ಅನುಮತಿ ನೀಡಿತ್ತು. ನಂತರ ಬಂದಿದ್ದು 1933ರ ಎನೇಬ್ಲಿಂಗ್ ಆ್ಯಕ್ಟ್, ಇದು ಹಿಟ್ಲರ್‌ಗೆ ಸಂಸತ್‌ನ ಅನುಮತಿ ಪಡೆಯದೆಯೇ ಯಾವ ಕಾನೂನನ್ನು ಬೇಕಾದರೂ ಜಾರಿ ಮಾಡುವಂತಹ ಅಧಿಕಾರವನ್ನು ನೀಡಿತ್ತು. ಹಿಟ್ಲರ್‌ನ ಶಬ್ದಗಳಲ್ಲೇ ಹೇಳುವುದಾದರೆ, ನಮ್ಮ ಸಾರ್ವಜನಿಕ ಜೀವನದ ರಾಜಕೀಯ ಮತ್ತು ನೈತಿಕ ಶುದ್ಧೀಕರಣಕ್ಕೆ ಇದು ಅಗತ್ಯವಾಗಿತ್ತು. ಹಾಗಾಗಿ ರಾಷ್ಟ್ರೀಯ ಸಮಾಜವಾದಿ ಪಕ್ಷದ ವಿಶ್ವಾಸಾರ್ಹತೆಯ ಬಗ್ಗೆ ಸ್ವಲ್ಪ ಕೂಡಾ ವಿರೋಧ ವ್ಯಕ್ತಪಡಿಸುವ ಯಾರೇ ಆದರೂ ಅಂಥವರು ಬಂಧನಕ್ಕೆ, ಒತ್ತಾಯದ ಗಡಿಪಾರಿಗೆ, ಹಿಂಸೆಗೆ ಮತ್ತು ಮೂಲೋತ್ಪಾಟನೆಗೆ ಒಳಗಾಗುತ್ತಿದ್ದರು. ಇನ್ನು ಯಹೂದಿಗಳ ಬಗ್ಗೆ ಹೇಳುವುದಾದರೆ, ಹಿಟ್ಲರ್ ಮತ್ತು ನಾಝಿಗಳು ಯಹೂದಿಗಳನ್ನು ಇಲಿಗಳಂತೆ ಒಂದು ಜೀವಿಗಳು ಎಂದು ಪರಿಗಣಿಸಿದ್ದ ಪರಿಣಾಮ ಅವರನ್ನು ಸುತ್ತುವರಿದು ಸಾಮೂಹಿಕ ಥಳಿತಕ್ಕೆ ಈಡುಮಾಡಲಾಗುತ್ತಿತ್ತು, ಅವರ ಆಸ್ತಿಪಾಸ್ತಿಗಳನ್ನು ನಾಶಮಾಡಲಾಗುತ್ತಿತ್ತು, ವ್ಯವಹಾರಗಳನ್ನು ಜಪ್ತಿಮಾಡಲಾಗುತ್ತಿತ್ತು ಮತ್ತು ಕೊನೆಯದಾಗಿ ಆಶ್ ವಿಟ್ಸ್, ಡಚಾವು, ಸೊಬಿಬೊರ್ ಮತ್ತು ಟ್ರೆಬ್ಲಿಂಕಾ ಮುಂತಾದ ಮೂಲೋತ್ಪಾಟನಾ ಶಿಬಿರಗಳಿಗೆ ಕಳುಹಿಸಲಾಗುತ್ತಿತ್ತು. ಜರ್ಮನಿಯ ಜನರು ಬಿಟ್ಟಿದ್ದೇ ಇಂತಹ ಭಯಾನಕತೆ ನಡೆಯಲು ಕಾರಣ. ಹಿಟ್ಲರ್ ಮತ್ತು ನಾಝಿಗಳು ಜರ್ಮನ್ನರ ವೌನ ಒಪ್ಪಿಗೆಯನ್ನು ಆನಂದಿಸುತ್ತಿದ್ದರು. ಬಲಿಷ್ಠ ರಾಷ್ಟ್ರದ ಹೆಸರಲ್ಲಿ ಜನರು ಎಲ್ಲವನ್ನೂ ಕಡೆಗಣಿಸಿದರು. ತುರ್ತುಸ್ಥಿತಿಯ ದುಸ್ವಪ್ನ
ನಮ್ಮಲ್ಲೂ ಸರ್ವಾಧಿಕಾರವಿತ್ತು, ಅದು ತುರ್ತುಪರಿಸ್ಥಿತಿ. ಮೂರು ಘಟನೆಗಳು 28 ವರ್ಷಗಳ ನಿರಂತರ ಪ್ರಜಾಪ್ರಭುತ್ವಕ್ಕೆ ಕೊನೆ ಹಾಡಿತ್ತು. ಮೊದಲನೆಯದು ಜಾರ್ಜ್ ಫೆರ್ನಾಂಡಿಸ್ ಆಯೋಜಿಸಿದ ಬೃಹತ್ ರೈಲ್ವೆ ಬಂದ್, ಇದನ್ನು ಸರಕಾರ ಭೀಕರವಾಗಿ ಹತ್ತಿಕ್ಕಿತ್ತು. ಎರಡನೆಯದು ವಿಪಕ್ಷ ನಾಯಕ ಜಯಪ್ರಕಾಶ್ ನಾರಾಯಣ್ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಕರೆನೀಡಿದ ಬೃಹತ್ ರ್ಯಾಲಿ. ನಾರಾಯಣ್ ಕರೆ ನೀಡಿದ ಅಹಿಂಸಾತ್ಮಕ ಸಂಪೂರ್ಣ ಕ್ರಾಂತಿ ರ್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು ಮತ್ತು ಮೂರನೆಯದು, ಜೂನ್ 24,1975ರಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಕೃಷ್ಣ ಅಯ್ಯರ್ ಅವರು ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ್ದ ತೀರ್ಪಿಗೆ ಷರತ್ತುಬದ್ಧ ತಡೆ ನೀಡಿದ ತೀರ್ಪು. ಉಚ್ಛ ನ್ಯಾಯಾಲಯವು ಚುನಾವಣೆಗಾಗಿ ಪ್ರಧಾನ ಮಂತ್ರಿಯವರು ಸರಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ತಪ್ಪಿತಸ್ಥರು ಎಂದು ತೀರ್ಪ ನೀಡಿತ್ತು. ಅದು ಸಂಸತ್‌ಗೆ ಆಕೆಯ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿತ್ತು ಮತ್ತು ಆಕೆಯನ್ನು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಿತ್ತು. ಇಂದಿರಾ ಗಾಂಧಿಯ ವಾದವನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯ ಆಕೆ ಪ್ರಧಾನಿಯಾಗಿ ಮುಂದುವರಿಯಲು ಅನುಮತಿ ನೀಡಿತ್ತು ಆದರೆ ಸಂಸದೀಯ ಕಲಾಪಗಳಲ್ಲಿ ಅಥವಾ ಮತಚಲಾವಣೆ ಮಾಡಲು ನಿಷೇಧ ಹೇರಿತ್ತು ಮತ್ತು ಪ್ರಕರಣವನ್ನು ನ್ಯಾಯಾಲಯದ ಉನ್ನತ ಪೀಠಕ್ಕೆ ವರ್ಗಾಯಿಸಿತ್ತು. ಮರುದಿನ, ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ಧಾರ್ಥ ಶಂಕರ್ ರಾಯ್ ಅವರು ಒದಗಿಸಿ ಪ್ರಶ್ನಾರ್ಹ ಕಾನೂನಾತ್ಮಕ ಸಮರ್ಥನೆಗಳನ್ನು ಹಿಡಿದುಕೊಂಡು ಇಂದಿರಾ ಗಾಂಧಿಯವರು ರಾಷ್ಟ್ರಪತಿ ಪಕ್ರುದ್ದೀನ್ ಅಲಿ ಅಹ್ಮದ್ ಅವರಲ್ಲಿ ಆಂತರಿಕ ತುರ್ತುಪರಿಸ್ಥಿತಿಯನ್ನು ಘೋಷಿಸುವಂತೆ ಹೇಳಿದರು. ಅಲಿ ಹಾಗೆಯೇ ಮಾಡಿದರು. ಆ ದಿನರಾತ್ರಿ ದಿಲ್ಲಿಯಲ್ಲಿ ಉದ್ದೇಶಪೂರ್ವಕವಾಗಿ ವಿದ್ಯುತ್ ಕಡಿತಗೊಳಿಸುವುದರ ಮೂಲಕ ಮರುದಿನದ ಪತ್ರಿಕೆ ಮುದ್ರಣಗೊಳ್ಳದಂತೆ ನೋಡಿಕೊಳ್ಳಲಾಯಿತು. ವಿಪಕ್ಷ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ವಿಜಯರಾಜೆ ಸಿಂಧಿಯಾ, ಎಲ್.ಕೆ. ಅಡ್ವಾಣಿ, ಜಯಪ್ರಕಾಶ್ ನಾರಾಯಣ್, ಆಚಾರ್ಯ ಕೃಪಲಾನಿ, ಮೊರಾರ್ಜಿ ದೇಸಾಯಿ ಮತ್ತು ಅಂದಿನ ವಿದ್ಯಾರ್ಥಿ ನಾಯಕ ಅರುಣ್ ಜೇಟ್ಲಿಯನ್ನೂ ಸೇರಿಸಿ ನೂರಾರು ಮಂದಿಯನ್ನು ಬಂಧಿಸಲು ಪೊಲೀಸರನ್ನು ಛೂ ಬಿಡಲಾಯಿತು. ಸಾವಿರಾರು ಮಂದಿಯನ್ನು ಬಂಧಿಸಲಾಯಿತು ಮತ್ತು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಅವರನ್ನು 1977ರ ಆರಂಭದವರೆಗೂ ಬಂಧನದಲ್ಲಿಡಲಾಯಿತು. ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ವಜಾಗೊಳಿಸಲಾಯಿತು, ಮಾಧ್ಯಮಗಳ ಸುದ್ದಿಗಳ ಮೇಲೆ ತೀವ್ರ ಕತ್ತರಿಪ್ರಯೋಗ ಮಾಡಲಾಯಿತು, ಅನಿರ್ದಿಷ್ಟ ಬಂಧನಗಳಿಗೆ, ಯಾವುದೇ ವಾರೆಂಟ್ ಇಲ್ಲದೆ ಶೋಧ ನಡೆಸಲು ಮತ್ತು ಜಪ್ತಿ ಮಾಡಲು ಮತ್ತು ರಾಜಕೀಯ ಅಸಮ್ಮತಿಯನ್ನು ನಾಶ ಮಾಡಲು ಕದ್ದಾಲಿಕೆಗೆ ಅವಕಾಶ ನೀಡಲು ಆಂತರಿಕ ಭದ್ರತಾ ವ್ಯವಸ್ಥಾಪನೆಯ ಕಾನೂ ನು (ಮೈಂಟೆನೆನ್ಸ್ ಆಫ್ ಇಂಟರ್ನಲ್ ಸೆಕ್ಯೂರಿಟಿ ಆ್ಯಕ್ಟ್) ಅಥವಾ ಎಂಐಎಸ್‌ಎಯನ್ನು ಮತ್ತಷ್ಟು ಬಲಪಡಿಸಲಾಯಿತು. ಇಂದಿರಾ ಗಾಂಧಿಯವರಿಂದ ಅನುಮೋದಿಸಲ್ಪಟ್ಟಿದ್ದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಎಎನ್ ರಾಯ್ ಯಾವುದೇ ಕಾರಣವನ್ನೂ ನೀಡದೆ ಯಾರನ್ನು ಬೇಕಾದರೂ ಬಂಧಿಸುವ ಸರಕಾರದ ಅಧಿಕಾರವನ್ನು ಎತ್ತಿಹಿಡಿದರು, ಆ ಮೂಲಕ ನಾಗರಿಕರ ಹೆಬಿಯಸ್ ಕೋರ್ಪಸ್ ಹಕ್ಕನ್ನು ಪರಿಣಾಮಕಾರಿಯಾಗಿ ಕಸಿಯಲಾಗಿತ್ತು. ಸಂಜಯ್ ಗಾಂಧಿ ನೇತೃತ್ವದಲ್ಲಿ ಗೂಂಡಾಗಳು ಮತ್ತು ಪೊಲೀಸರು ಎಲ್ಲವನ್ನೂ ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡರು. ಈ ಅವಧಿಯು ಸಾವಿರಾರು ಒತ್ತಾಯಪೂರ್ವಕ ಸಂತಾನಹರಣ ಕ್ರಿಯೆಗಳನ್ನು, ಬಂದೂಕು ತೋರಿಸಿ ಕೊಳೆಗೇರಿಗಳ ತೆರವು, ಮನಸೋ ಇಚ್ಛೆ ಬಂಧನ ಮತ್ತು ಪೊಲೀಸರ ಥಳಿತವನ್ನು ಕಂಡಿತು. ಯುವಕಾಂಗ್ರೆಸ್ ನಿಯಂತ್ರಣವಿಲ್ಲದವರಂತೆ ಹಿಂಸೆಯಲ್ಲಿ ತೊಡಗಿತ್ತು, ಜಂಗಲ್ ರಾಜ್‌ನ ಅಧ್ಯಕ್ಷತೆ ವಹಿಸಿದ್ದ ಸಂಜಯ್ ಗಾಂಧಿಯ ನೈಜ ಮತ್ತು ಕಲ್ಪನೆಯ ಬಯಕೆಗಳು ಪ್ರತಿಯೊಬ್ಬ ಕಾಂಗ್ರೆಸ್ ಪುಂಡನಿಗೆ ಆಜ್ಞೆಯಂತೆ ಕಾಣುತ್ತಿತ್ತು. ಅದು 21 ತಿಂಗಳುಗಳ ಕಾಲದ ಸುದೀರ್ಘ ದುಸ್ವಪ್ನ. ಸರಕಾರದ ವಿರುದ್ಧ ಅಸಮ್ಮತಿ ತೋರಿದವರೆಲ್ಲರೂ ಜೈಲಲ್ಲಿದ್ದ ಕಾರಣ ಸಾರ್ವಜನಿಕ ಪ್ರತಿಭಟನೆಗಳು ಇಲ್ಲದಂತಾಗಿ ತುರ್ತುಪರಿಸ್ಥಿತಿಯನ್ನು ಒಂದೋ ವೌನವಾಗಿ ಸ್ವೀಕರಿಸಲಾಯಿತು ಅಥವಾ ಅಬ್ಬರದಿಂದ ಪ್ರೋತ್ಸಾಹಿಸಲಾಯಿತು. ವಿಶ್ವವಿದಾನಿಲಯಗಳು ಅಸಮ್ಮತಿಯ ತಾಣಗಳು
ಈಗ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರಕರಣವನ್ನು ತೆಗೆದುಕೊಳ್ಳಿ. ವಿರುದ್ಧ ಸಂಸ್ಕೃತಿ ಮತ್ತು ಅಸಮ್ಮತಿಯ ನಡುವೆ ಶೈಕ್ಷಣಿಕವಾಗಿ ಸಮೃದ್ಧಿ ಹೊಂದಿರದ ಯಾವುದೇ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಬಗ್ಗೆ ನನಗೆ ತಿಳಿದಿಲ್ಲ. ಕೊಲ್ಕತ್ತಾ ವಿಶ್ವವಿದ್ಯಾನಿಲಯವಲ್ಲ, ದಿಲ್ಲಿಯೂ ಅಲ್ಲ, ಸೊರ್ಬೊನೆ, ಬರ್ಲಿನ್, ಹೈಡಲ್ ಬರ್ಗ್ ಕೂಡಾ ಅಲ್ಲ. ಇನ್ನು ಆಕ್ಸ್ ಫರ್ಡ್ ಅಥವಾ ಕೇಂಬ್ರಿಡ್ಜ್ ಅಥವಾ ಲಂಡನ್ ವಿಶ್ವವಿದ್ಯಾನಿಲಯ ಕೂಡಾ ಅಲ್ಲ. ಬಕ್ರ್ಲಿ, ಕೆಂಟ್ ಸ್ಟೇಟ್, ಹಾರ್ವರ್ಡ್ ವಿಶ್ವವಿದ್ಯಾನಿಲಯವೂ ಅಲ್ಲ. ಇದರಲ್ಲಿ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ನಾನು ಕಲಿತಿದ್ದೇನೆ ಮತ್ತು ಕಲಿಸಿದ್ದೇನೆ ಹಾಗಾಗಿ ನಾನು ಏನು ಬರೆಯುತ್ತಿದ್ದೇನೆ ಎಂಬುದು ನನಗೆ ತಿಳಿದಿದೆ. ಅಫ್ಝಲ್ ಗುರು ಪರ ಮತ್ತು ಭಾರತ ವಿರೋಧಿ ಹೇಳಿಕೆಗಳನ್ನು ನೀಡಲಾಗಿದೆ ಎಂದು ನಂಬಿದರೂ ಇವುಗಳು ದೇಶದ್ರೋಹಕ್ಕೆ ಸಮಾನವಾಗುತ್ತವೆಯೇ? ವಿಶ್ವವಿದ್ಯಾನಿಲಯವೊಂದಕ್ಕೆ ಹೊಕ್ಕು ಡಜನ್ ಗಟ್ಟಲೆ ಅಥವಾ ಅದಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನು ಬಂಧಿಸಲು ಪೊಲೀಸರಿಗೆ ಇದು ಅನುಮತಿ ನೀಡುತ್ತದೆಯೇ? ನ್ಯಾಯಾಲಯದ ಆವರಣದಲ್ಲಿದ್ದ ಪತ್ರಕರ್ತರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಬಿಜೆಪಿ ಶಾಸಕನ ನೇತೃತ್ವದ ಗೂಂಡಾಪಡೆ, ಅದರಲ್ಲೂ ಕೆಲವರು ವಕೀಲರ ವೇಷತೊಟ್ಟವರು ಹಲ್ಲೆ ನಡೆಸಲು ಇದು ಅನುಮತಿ ನೀಡುತ್ತದೆಯೇ? ಈ ಪ್ರತಿಭಟನೆಯನ್ನು ಹಫೀಝ್ ಸೈಯದ್ ಮತ್ತು ಲಷ್ಕರೆ ತಯ್ಯಿಬಾ (ನಕಲಿ ಟ್ವಿಟರ್ ಮೂಲಕ ಬಂದ ಸಂದೇಶದ ಆಧಾರದಲ್ಲಿ ನೀಡಿದ ಹೇಳಿಕೆ) ರೂಪಿಸಿತ್ತು ಎಂದು ಗೃಹ ಸಚಿವರು ಹೇಳುವಷ್ಟರ ಮಟ್ಟಿಗೆ ವಿದ್ಯಾರ್ಥಿಗಳ ಪ್ರತಿಭಟನೆ ಭಾರತದ ಒಗ್ಗಟ್ಟು ಮತ್ತು ಆಡಳಿತ ವ್ಯವಸ್ಥೆಗೆ ಅಪಾಯಕಾರಿಯಾಗಿತ್ತೇ?