ಶೀಘ್ರವೇ 3 ದಿನಗಳಲ್ಲಿ ಮಂಗಳ ತಲುಪಬಲ್ಲ ಲೇಸರ್ ತಂತ್ರಜ್ಞಾನ!
ನ್ಯೂಯಾರ್ಕ್, ಫೆ. 22: ಈಗ ಲಭ್ಯವಿರುವ ತಂತ್ರಜ್ಞಾನದ ಮೂಲಕ ಮಾನವರು ಮಂಗಳ ಗ್ರಹವನ್ನು ತಲುಪಲು ಕನಿಷ್ಠ 5 ತಿಂಗಳುಗಳು ಬೇಕು. ಆದರೆ, ಈಗ ನಾಸಾ ವಿಜ್ಞಾನಿಗಳು ನೂತನ ಲೇಸರ್ ತಂತ್ರಜ್ಞಾನ ಸಂಶೋಧನೆಯೊಂದರಲ್ಲಿ ತೊಡಗಿದ್ದು, ಇದು ಸಾಕಾರಗೊಂಡರೆ, ಕೇವಲ ಮೂರು ದಿನಗಳಲ್ಲಿ ಮಾನವರು ಕೆಂಪು ಗ್ರಹವನ್ನು ತಲುಪಬಹುದಾಗಿದೆ.
ಬಾಹ್ಯಾಕಾಶ ನೌಕೆಯ ಚಲನೆಗೆ ಲೇಸರ್ ಬಳಸುವುದು ನೂತನ ಸಂಶೋಧನೆಯ ಹಿಂದಿನ ಕಲ್ಪನೆ. ಆದರೆ, ಇದು ವೈಜ್ಞಾನಿಕ ಕಾದಂಬರಿಯಲ್ಲ!
ನೂತನ ‘ಫೋಟಾನಿಕ್ ಪ್ರೊಪಲ್ಶನ್’ ವ್ಯವಸ್ಥೆಯು ಮುಂದಕ್ಕೆ ಚಲಿಸಲು ಬೆಳಕಿನ ಕಣಗಳಾದ ಫೋಟಾನ್‌ನ ರಭಸ (ಮೊಮೆಂಟಂ)ವನ್ನು ಅವಲಂಬಿಸುತ್ತದೆ.
ಆದರೆ, ಈ ಉದ್ದೇಶಕ್ಕೆ ಸೂರ್ಯ ಕಿರಣಗಳ ಫೋಟಾನ್‌ಗಳನ್ನು ಬಳಸುವ ಬದಲು, ನಾಸಾ ವಿಜ್ಞಾನಿ ಫಿಲಿಪ್ ಲೂಬಿನ್ ಸಿದ್ಧಪಡಿಸಿರುವ ವಿನ್ಯಾಸವು ಬಾಹ್ಯಾಕಾಶ ನೌಕೆಯನ್ನು ಮುಂದಕ್ಕೆ ನೂಕಲು ದೈತ್ಯ ಭೂ ಆಧಾರಿತ ಲೇಸರ್‌ಗಳನ್ನು ಬಳಸುತ್ತದೆ.
ನಾಸಾ ಈಗ ಮಾನವರನ್ನು ಮಂಗಳ ಗ್ರಹಕ್ಕೆ ಕೊಂಡೊಯ್ಯಬಲ್ಲ ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಕೆಟ್ ‘ಸ್ಪೇಸ್ ಲಾಂಚ್ ಸಿಸ್ಟಮ್’ನ ನಿರ್ಮಾಣದಲ್ಲಿ ತೊಡಗಿದೆ.





