ದೇವರನ್ನು ನಂಬುತ್ತೇನೆ, ವೌಢ್ಯವನ್ನಲ್ಲ: ಸಿದ್ದರಾಮಯ್ಯ
ಟಿ.ನರಸೀಪುರ: 10ನೆ ಕುಂಭಮೇಳ ಸಮಾರೋಪ

‘ಮುಂದಿನ ಅಧಿವೇಶದಲ್ಲಿ ವೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಚಿಂತನೆ’
ಮೈಸೂರು, ಫೆ.22: ನಾನೇನು ನಾಸ್ತಿಕನಲ್ಲ. ದೇವರ ಮೇಲೆ ನಂಬಿಕೆ ಇಲ್ಲವೆಂದಲ್ಲ. ಆದರೆ, ವೌಡ್ಯ, ಕಂದಾಚಾರದ ಮೇಲೆ ನನಗೆ ನಂಬಿಕೆ ಇಲ್ಲ. ಯಾವುದೇ ವಿಷಯವನ್ನು ವೈಜ್ಞಾನಿಕ ಮತ್ತು ವೈಚಾರಿಕತೆಯ ನೆಲೆಗಟ್ಟಿನಲ್ಲಿ ಚಿಂತಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ನಡೆಯುತ್ತಿರುವ 10ನೆ ಕುಂಭಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೈಜ್ಞಾನಿಕ ನೆಲೆಯಲ್ಲಿ ಚಿಂತಿಸುವುದರಿಂದ ನನ್ನನ್ನು ನಾಸ್ತಿಕ ಎಂದು ಕರೆಯುವುದು ಸರಿಯಲ್ಲ ಎಂದು ತಿಳಿಸಿದರು. ನಾನು ಶಾಲೆಗೆ ಸೇರುವ ಮೊದಲೇ ನನ್ನ ತಂದೆ ನನ್ನನ್ನು ವೀರ ಮಕ್ಕಳ ಕುಣಿತಕ್ಕೆ ಸೇರಿಸಿದ್ರು. ದೇವರ ಜಾತ್ರೆಗಳಿಗೆ ನಾವು ಕುಣಿಯುತ್ತಿದ್ದೆವು. ಪ್ರತಿ ಯುಗಾದಿ ಹಬ್ಬದ ಜಾತ್ರೆಯಲ್ಲಿ ನಾನು ವೀರ ಕುಣಿತ ಕುಣಿಯುತ್ತಿದ್ದೆ. ಈ ಮೂಲಕ ಶಿಕ್ಷಣ ಪಡೆಯುವ ಮೊದಲೇ ದೇವರ ಸೇವೆ ಮಾಡುತ್ತಿದ್ದೆವು ಎಂದು ಹೇಳಿದರು. ನೋಡುವ ದೃಷ್ಟಿ ವೈಜ್ಞಾನಿಕ ಮತ್ತು ವೈಚಾರಿಕತೆಯಿಂದ ಕೂಡಿದ್ದರೆ ಬಸವಣ್ಣ ಕಂಡ ವೈಚಾರಿಕ ಸಮಾಜ ನಿರ್ಮಾಣ ಸಾಧ್ಯ. ದೇವರು ಎಲ್ಲೆ ಇದ್ದರೂ ಒಂದೇ. ಪುಣ್ಯ ಸಿಗುತ್ತೆ ಅಂತ ಹಿಮಾಲಯಕ್ಕೆ ಹೋಗುವುದರಲ್ಲಿ ಅರ್ಥವಿಲ್ಲ. ಪಕ್ಕದಲ್ಲಿರುವ ದೇವರೂ ದೇವರೆ. ಭಾರತ ವಿವಿಧತೆಯಲ್ಲಿ ಏಕತೆ ಸಾರುತ್ತಿರುವ ರಾಷ್ಟ್ರ. ವೌಢ್ಯ ಮತ್ತು ಕಂದಾಚಾರವನ್ನು ಬಿಡಬೇಕು. ವೌಢ್ಯಗಳನ್ನು ಧರ್ಮದ ಚೌಕಟ್ಟಿನಲ್ಲಿ ತರಬಾರದು ಎಂದರು. ಉತ್ತರ ಭಾರತದಲ್ಲಿ ನಡೆಯುವ ಕುಂಭ ಮೇಳಗಳ ಸಾಲಿಗೆ ಟಿ.ನರಸೀಪುರದ ಕುಂಭ ಮೇಳವೂ ಸೇರುವಂತೆ ಮೂಲಸೌಕರ್ಯಗಳನ್ನು ಒದಗಿಸಲು ರಾಜ್ಯ ಸರಕಾರ ಬದ್ಧವಿದ್ದು, ಮುಂದಿನ ಬಾರಿ ಕುಂಭ ಮೇಳ ನಡೆಯುವ ವೇಳೆಗೆ ಟಿ.ನರಸೀಪುರದಲ್ಲಿ ಎಲ್ಲ ಬಗೆಯ ಸೌಕರ್ಯ ಒದಗಿಸುತ್ತೇವೆ ಎಂದು ತಿಳಿಸಿದರು. ಇದಕ್ಕು ಮುನ್ನ ಮಾತನಾಡಿದ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ನರಸೀಪುರದ ಅಭಿವೃದ್ಧಿಗೆ ರಾಜ್ಯ ಸರಕಾರ 50 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದೆ. ಧಾರ್ಮಿಕ ಸಭೆ-ಸಮಾರಂಭಗಳಿಗೆ ಸಂವಿಧಾನದಲ್ಲಿ ಅವಕಾಶವಿದ್ದು, ಸರಕಾರ ಸಂವಿಧಾನಬದ್ಧವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು. ಧಾರ್ಮಿಕ ವೈಚಾರಿಕತೆಯಲ್ಲಿ ಸರಕಾರ ಮಧ್ಯ ಪ್ರವೇಶ ಮಾಡುವುದಿಲ್ಲ. ಟಿ.ನರಸೀಪುರದ ಕುಂಭಮೇಳ ಪ್ರದೇಶವನ್ನು ಗುಜರಾಜ್‌ನ ಸಬರಮತಿ ಆಶ್ರಮ ಮಾದರಿಯಲ್ಲಿ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾ ಸ್ವಾಮೀಜಿ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹಾದೇವಪ್ರಸಾದ್ , ಸಂಸದ ಆರ್.ಧ್ರುವನಾರಾಯಣ, ಶಾಸಕರಾದ ಎಂ.ಕೆ.ಸೋಮಶೇಖರ್, ನರೇಂದ್ರಕುಮಾರ್, ಆರ್.ಧರ್ಮಸೇನಾ ಮೊದಲಾದವರು ಉಪಸ್ಥಿತರಿದ್ದರು.





