ತಂದೆಯಿಂದ ಮಕ್ಕಳಿಬ್ಬರ ಕೊಲೆ: ಆರೋಪಿ ಬಂಧನ

ಬೆಂಗಳೂರು, ಫೆ. 22: ತಂದೆಯೇ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿನ ಕೆ.ಪಿ.ಅಗ್ರಹಾರ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ತಂದೆಯನ್ನು ಇಲ್ಲಿನ ಕೆ.ಪಿ.ಅಗ್ರಹಾರ ಸಮೀಪದ ಭುವನೇಶ್ವರನಗರದ ಬೆಟ್ಟಮ್ಮ ವೃತ್ತದ ನಿವಾಸಿ ಶಿವಕುಮಾರ್(26) ಎನ್ನಲಾಗಿದ್ದು, ತಂದೆಯಿಂದಲೇ ಕೊಲೆಯಾದ ದುರ್ದೈವಿ ಮಕ್ಕಳನ್ನು ಪವನ್‌ಕುಮಾರ್(9) ಮತ್ತು ಸಿಂಚನಾ(6) ಎಂದು ಗುರುತಿಸಲಾಗಿದೆ.
ಆರೋಪಿ ತಂದೆ ಶಿವಕುಮಾರ್ ನಗರದ ಚಿಕ್ಕಪೇಟೆಯ ಬ್ಯಾಗ್ ಅಂಗಡಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಶನಿವಾರ ತನ್ನ ಇಬ್ಬರು ಮಕ್ಕಳನ್ನು ತಿಂಡಿ ಕೊಡಿಸು ವುದಾಗಿ ಮನೆಯಿಂದ ಹೊರ ಕರೆದೊಯ್ದು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿ ಶವಗಳನ್ನು ಗೋಣಿ ಚೀಲದಲ್ಲಿ ಕಟ್ಟಿ ಮೋರಿಗೆ ಎಸೆದು, ತದನಂತರ ಏನೂ ತಿಳಿಯದಂತೆ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸಂಜೆಯಾದರೂ ಮಕ್ಕಳು ಮನೆಗೆ ಬಾರದ್ದನ್ನು ಕಂಡು ಗಾಬರಿಯಾದ ಪತ್ನಿ ವಸಂತ ಯಾನೆ ತಾಯಮ್ಮ ಪತಿಗೆ ಮೊಬೈಲ್ ಕರೆ ಮಾಡಿ ಮಕ್ಕಳೆಲ್ಲಿ? ಎಂದು ಪ್ರಶ್ನಿಸಿದಾಗ ಆತ ಮಕ್ಕಳಿಬ್ಬರು ಮಲೆಮಹದೇಶ್ವರ ಬೆಟ್ಟದಲ್ಲಿ ತಪ್ಪಿಸಿಕೊಂಡಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ ಎನ್ನಲಾಗಿದೆ. ಆರೋಪಿ ತಂದೆ ಶಿವಕುಮಾರ್ ವರ್ತನೆಯಿಂದ ಅನುಮಾನಗೊಂಡ ಪತ್ನಿ ಮತ್ತು ಸಂಬಂಧಿಕರು ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಬೆದರಿಸಿದಾಗ ಮಕ್ಕಳಿಬ್ಬರನ್ನು ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅಲ್ಲದೆ, ನಿನ್ನೆ ರಾತ್ರಿ ಇಲ್ಲಿನ ಕೆ.ಪಿ.ಅಗ್ರಹಾರದ 10ನೆ ಅಡ್ಡರಸ್ತೆಯ ಕಾಲುವೆಯಲ್ಲಿ ಗೋಣಿ ಚೀಲವೊಂದು ಬಿದ್ದಿರುವುದನ್ನು ಕಂಡು ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಗೋಣಿಚೀಲ ಪರಿಶೀಲಿಸಿದ ಪೊಲೀಸರಿಗೆ ಮಕ್ಕಳಿಬ್ಬರ ಶವ ಪತ್ತೆಯಾಗಿದೆ.
ತನಿಖೆ ಕೈಗೊಂಡ ಪೊಲೀಸರು ಮಕ್ಕಳ ಗುರುತು ಪತ್ತಹಚ್ಚಿ ಮಲೆಮಹದೇಶ್ವರ ಬೆಟ್ಟದಲ್ಲಿದ್ದ ಆರೋಪಿ ತಂದೆಯನ್ನು ಬಂಧಿಸಿ ವಿಚಾರಣೆ ಕೈಗೊಂಡಾಗ, ಖಾಸಗಿ ಶಾಲೆಯೊಂದರಲ್ಲಿ ಮಕ್ಕಳಿಬ್ಬರು ವ್ಯಾಸಂಗ ಮಾಡುತ್ತಿದ್ದು, ಮಕ್ಕಳ ಶಾಲಾ ಶುಲ್ಕ ಪಾವತಿಸಿಲ್ಲ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಶನಿವಾರ ಪತ್ನಿಯೊಂದಿಗೆ ಜಗಳವಾಡಿದ್ದ ಎನ್ನಲಾಗಿದೆ.
ಸಾಲ ಮಾಡಿ ಹಣಕಾಸು ಸಮಸ್ಯೆಯಿಂದ ತಲೆ ಕೆಟ್ಟು ಹೋಗಿತ್ತು, ಮಕ್ಕಳ ಶಾಲಾ ಶುಲ್ಕ ಪಾವತಿ ಬಗ್ಗೆ ಇತ್ತೀಚಿಗೆ ಮನೆಯಲ್ಲಿ ಜಗಳ ನಡೆಯುತಿತ್ತು. ಹೀಗಾಗಿ, ಮಕ್ಕಳಿಬ್ಬರನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದೇನೆ ಎಂದು ಆರೋಪಿ ತಂದೆ ಶಿವಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಹೆಚ್ಚುವರಿ ತನಿಖೆ ಕೈಗೊಂಡಿದ್ದಾರೆ.







