ಪ್ರಥಮ ಟ್ವೆಂಟಿ-20:ಅನುಜಾ ಆಲ್‌ರೌಂಡ್ ಆಟ ಭಾರತ ಶುಭಾರಂಭ

ರಾಂಚಿ, ಫೆ.22: ಅನುಜಾ ಪಾಟೀಲ್‌ರ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಭಾರತದ ಮಹಿಳಾ ತಂಡ ಶ್ರೀಲಂಕಾ ವಿರುದ್ಧದ ಟ್ವಂಟಿ-20 ಸರಣಿಯಲ್ಲಿ ಶುಭಾರಂಭ ಮಾಡಿದೆ.
ಸೋಮವಾರ ಇಲ್ಲಿನ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಅನುಜಾ ಪಾಟೀಲ್ 4 ಓವರ್‌ಗಳಲ್ಲಿ 14 ರನ್ ನೀಡಿ 3 ವಿಕೆಟ್‌ಗಳನ್ನು ಉರುಳಿಸಿ ಶ್ರೀಲಂಕಾವನ್ನು 96 ರನ್‌ಗೆ ನಿಯಂತ್ರಿಸಿ ಭಾರತಕ್ಕೆ 34 ರನ್ ಗಳ ಗೆಲುವು ತಂದುಕೊಟ್ಟರು.
ಇದಕ್ಕೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ತಂಡ ಹರ್ಮನ್‌ಪ್ರೀತ್ ಕೌರ್(36), ಸ್ಮತಿ ಮಂದಾನಾ 35 ಹಾಗೂ ಅನುಜಾರ 22 ರನ್ ಕೊಡುಗೆಯ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತು.
ಸುಗಂಧಿಕಾ ಕುಮಾರಿ ಸತತ ಎಸೆತಗಳಲ್ಲಿ ವನಿತಾ ಹಾಗೂ ನಾಯಕಿ ಮಿಥಾಲಿ ರಾಜ್ ವಿಕೆಟ್‌ಗಳನ್ನು ಉರುಳಿಸಿದರು. ಆಗ ಭಾರತದ ಸ್ಕೋರ್ 15 ರನ್‌ಗೆ 2 ವಿಕೆಟ್.
ಮೂರನೆ ವಿಕೆಟ್‌ಗೆ 61 ರನ್ ಜೊತೆಯಾಟ ನಡೆಸಿದ ಹರ್ಮನ್‌ಪ್ರೀತ್ ಹಾಗೂ ಸ್ಮತಿ ಮಂಧಾನಾ ಭಾರತದ ಇನಿಂಗ್ಸ್‌ಗೆ ಜೀವ ತುಂಬಿದರು. ಭಾರತ 99 ರನ್‌ಗೆ 4 ವಿಕೆಟ್ ಕಳೆದುಕೊಂಡಾಗ ಕ್ರೀಸ್‌ಗೆ ಆಗಮಿಸಿದ ಅನುಜಾ17 ಎಸೆತಗಳನ್ನು ಎದುರಿಸಿ 3 ಬೌಂಡರಿಗಳ ಸಹಿತ 22 ರನ್ ಗಳಿಸಿದರು.
ಈ ಮೂಲಕ ಭಾರತ ನಿಗದಿತ 20 ಓವರ್‌ಗಳಲ್ಲಿ 130 ರನ್ ಗಳಿಸಲು ನೆರವಾದರು.
ಗೆಲ್ಲಲು ಸ್ಪರ್ಧಾತ್ಮಕ ಮೊತ್ತ ಪಡೆದ ಶ್ರೀಲಂಕಾ ಮೊದಲ ಓವರ್‌ನಲ್ಲಿ ಕೆಲವು ಬೌಂಡರಿ ಬಾರಿಸಿ ಉತ್ತಮ ಆರಂಭ ಪಡೆದಿತ್ತು. ಸ್ಪಿನ್ನರ್ ಅನುಜಾ ಆರಂಭಿಕ ಆಟಗಾರ್ತಿ ಮೆಂಡಿಸ್ ವಿಕೆಟ್ ಉರುಳಿಸಿದರು.
ಮುಂದಿನ ಓವರ್‌ನಲ್ಲಿ ಚಾಮರಿ ಅಟಪಟು ವಿಕೆಟ್ ಪಡೆದ ಅನುಜಾ ಭಾರತಕ್ಕೆ ಮೇಲುಗೈ ಒದಗಿಸಿಕೊಟ್ಟರು. ಆರಂಭಿಕ ಆಟಗಾರ್ತಿಯರನ್ನು ಬೇಗನೆ ಕಳೆದುಕೊಂಡ ಶ್ರೀಲಂಕಾ ಆ ನಂತರ ಚೇತರಿಸಿಕೊಳ್ಳಲು ವಿಫಲವಾಯಿತು.
ದಿಲಾನಿ ಮನೊದರಾ ಹಾಗೂ ನಾಯಕಿ ಶಶಿಕಲಾ ಸಿರಿವರ್ಧನೆ 4ನೆ ವಿಕೆಟ್‌ಗೆ 38 ರನ್ ಜೊತೆಯಾಟ ನಡೆಸಿದರು. ಈ ಜೋಡಿಯನ್ನು ಪೂನಂ ಯಾದವ್ ಬೇರ್ಪಡಿಸಿದರು. ಮನೊದರಾ ಔಟಾಗದೆ 41 ರನ್ ಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ವಿಫಲರಾದರು.
ಸಂಕ್ಷಿಪ್ತ ಸ್ಕೋರ್
ಭಾರತ 20 ಓವರ್‌ಗಳಲ್ಲಿ 130/6
(ಹರ್ಮನ್‌ಪ್ರೀತ್ ಕೌರ್ 36, ಸ್ಮತಿ ಮಂದಾನಾ 35, ಸುಗಂಧಿಕಾ ಕುಮಾರಿ 3-28)
ಶ್ರೀಲಂಕಾ: 20 ಓವರ್‌ಗಳಲ್ಲಿ 96/7
(ದಿಲಾನಿ ಮನೋದರಾ ಔಟಾಗದೆ 41, ಅನುಜಾ ಪಾಟೀಲ್ 3-14)







