ಎಸಿ ಚೇಂಬರ್‌ನಿಂದ ಹೊರ ಬಂದು ನೀರಿನ ಸಮಸ್ಯೆಗೆ ಪರಿಹಾರ ಹುಡುಕಿ
ಆಪ್ ಸರಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ
ಹೊಸದಿಲ್ಲಿ, ಫೆ.22: ಸರಕಾರಗಳ ಮಟ್ಟದಲ್ಲಿ ಬಗೆಹರಿಸಿಕೊಳ್ಳುವ ಬದಲು ಪ್ರತಿಯೊಂದೂ ವಿಷಯಕ್ಕೆ ತನ್ನ ಮೊರೆ ಹೋಗುತ್ತಿರುವದಕ್ಕಾಗಿ ದಿಲ್ಲಿ ಸರಕಾರವನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತೀವ್ರ ತರಾಟೆಗೆತ್ತಿಕೊಂಡಿತು.
ಹರ್ಯಾಣದಲ್ಲಿ ನಡೆಯುತ್ತಿರುವ ಜಾಟ್ ಮೀಸಲಾತಿ ಪ್ರತಿಭಟನೆಯಿಂದಾಗಿ ರಾಷ್ಟ್ರ ರಾಜಧಾನಿಗೆ ವ್ಯತ್ಯಯಗೊಂಡಿರುವ ನೀರಿನ ಪೂರೈಕೆ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಕೋರಿ ದಿಲ್ಲಿ ಸರಕಾರವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ.
ದಿಲ್ಲಿ ಸರಕಾರದ ನಿಲುವಿಗೆ ಸಿಡಿಮಿಡಿಗೊಂಡ ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ್ ನೇತೃತ್ವದ, ನ್ಯಾ.ಯು.ಯು.ಲಲಿತ್ ಅವರನ್ನೊಳಗೊಂಡ ಪೀಠವು, ಸರಕಾರಗಳ ಮಟ್ಟದಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಬದಲು ನೀವು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುತ್ತೀರಿ. ಪ್ರತಿಯೊಂದಕ್ಕೂ ನಿಮಗೆ ಸರ್ವೋಚ್ಚ ನ್ಯಾಯಾಲಯದ ಆದೇಶ ಬೇಕು. ನಿಮಗೆ ಎಲ್ಲವನ್ನೂ ತಟ್ಟೆಯಲ್ಲಿಯೇ ಇಟ್ಟು ಕೊಡಬೇಕು ಎಂದು ಟೀಕಿಸಿತು.
ನೀವು ಸಚಿವರು ಸ್ಥಳಗಳಿಗೆ ತೆರಳುವ ಬದಲು ನ್ಯಾಯಾಲಯದಲ್ಲಿರುತ್ತೀರಿ. ಹವಾ ನಿಯಂತ್ರಿತ ಕೋಣೆಗಳಲ್ಲಿ ಆರಾಮವಾಗಿರುವ ನೀವು ನ್ಯಾಯಾಲಯದಿಂದ ಆದೇಶವನ್ನು ಬಯಸುತ್ತೀರಿ ಎಂದು ನ್ಯಾಯಾಲಯದಲ್ಲಿ ದಿಲ್ಲಿ ಜಲ ಸಚಿವ ಕಪಿಲ್ ಮಿಶ್ರಾ ಅವರ ಉಪಸ್ಥಿತಿಯನ್ನು ಪ್ರಸ್ತಾಪಿಸಿ ಪೀಠವು ಕುಟುಕಿತು.
ಆದರೂ ದಿಲ್ಲಿ ಸರಕಾರದ ಪರ ನ್ಯಾಯವಾದಿ ರಾಜೀವ ಧವನ್ ಅವರು ಪದೇಪದೇ ಕೋರಿಕೊಂಡ ಬಳಿಕ ಪೀಠವು ರಾಜಧಾನಿಗೆ ನೀರು ಪೂರೈಕೆಯನ್ನು ಪುನರಾರಂಭಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಹರ್ಯಾಣ ಸರಕಾರಕ್ಕೆ ಸೂಚಿಸಿತು.
ದಿಲ್ಲಿ ಸರಕಾರದ ಅರ್ಜಿಗೆ ಸಂಬಂಧಿಸಿದಂತೆ ಹರ್ಯಾಣ ಸರಕಾರದಿಂದ ಸ್ಥಿತಿಗತಿ ವರದಿಯನ್ನು ಕೇಳಿರುವ ನ್ಯಾಯಾಲಯವು ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರಗಳಿಗೆ ನೋಟಿಸುಗಳನ್ನು ಹೊರಡಿಸಿದೆ. ಹರ್ಯಾಣದ ಮುನಾಕ್ ಕಾಲುವೆಯ ಅಣೆಕಟ್ಟುಗಳ ಸುರಕ್ಷತೆಯನ್ನು ಕಾಯ್ದುಕೊಳ್ಳಲು ನಿರ್ದೇಶನವನ್ನು ದಿಲ್ಲಿ ಸರಕಾರದ ಅರ್ಜಿಯು ಕೋರಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲಾಗುತ್ತಿದ್ದು, ತಕ್ಷಣದಿಂದಲೇ ನೀರು ಪೂರೈಕೆ ಪುನರಾರಂಭಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ಹರ್ಯಾಣ ಸರಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಮೀಸಲಾತಿಗೆ ಪಟ್ಟು ಹಿಡಿದು ಮುಷ್ಕರದಲ್ಲಿ ತೊಡಗಿರುವ ಜಾಟ್ ಸಮುದಾಯವು ಮುನಾಕ್ ಕಾಲುವೆಗೆ ಮುತ್ತಿಗೆ ಹಾಕಿದ್ದು, ನಿರಂತರ ನೀರು ಪೂರೈಕೆಯಾಗುವಂತೆ ಕೇಂದ್ರದ ಹಸ್ತಕ್ಷೇಪವನ್ನು ಕೋರಿ ದಿಲ್ಲಿಯ ಆಪ್ ಸರಕಾರವು ರವಿವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿ,ತುರ್ತು ವಿಚಾರಣೆ ನಡೆಸುವಂತೆ ನಿವೇದಿಸಿಕೊಂಡಿತ್ತು.







