ದೆಹಲಿನಲ್ಲಿ ಇಂದು ಕನ್ಹಯ್ಯ ಜಾಮೀನು ಅರ್ಜಿ ವಿಚಾರಣೆ
ತಿರುಚಿದ ವೀಡಿಯೊ ಕೇಂದ್ರ ಬಿಂದು

ಹೊಸದಿಲ್ಲಿ, ಫೆ.23: ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿರುವ ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಕನ್ಹಯ್ಯ ಕುಮಾರ್ ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದು ದೆಹಲಿ ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ. ಜಸ್ಟಿಸ್ ಪ್ರತಿಭಾ ರಾಣಿ ನೇತೃತ್ವದ ಹೈಕೋರ್ಟ್ ಪೀಠ ಈ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ. ಇದಕ್ಕೂ ಮುಂಚೆ ಸುಪ್ರೀಂ ಕೋರ್ಟ್ ಕನ್ಹಯ್ಯನ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿತ್ತು.
ಹೈಕೋರ್ಟ್ ವಿಚಾರಣೆಗೆ ವಕೀಲರು, ಆರೋಪಿಯ ಕುಟುಂಬ ಸದಸ್ಯರು ಹಾಗೂ ಮಾಧ್ಯಮ ಮಂದಿಗೆ ಹೊರತಾಗಿ ಬೇರೆಯವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಫೆ. 12ರಂದು ದೇಶ ವಿರೋಧಿ ಘೋಷಣೆಗಳನ್ನು ಸಂಸತ್ ದಾಳಿ ಘಟನೆಯ ರೂವಾರಿ ಅಫ್ಜಲ್ ಗುರು ಸ್ಮರಣಾರ್ಥ ಜೆಎನ್‌ಯು ಕ್ಯಾಂಪಸ್ಸಿನಲ್ಲಿ ನಡೆದ ಸಭೆಯೊಂದರಲ್ಲಿ ಕೂಗಿದ್ದರೆಂಬ ಆರೋಪದಲ್ಲಿ ಕನ್ಹಯ್ಯನನ್ನು ಬಂಧಿಸಲಾಗಿತ್ತು. ಘಟನೆಯ ನಂತರ ತಲೆಮರೆಸಿಕೊಂಡಿದ್ದ ದೇಶದ್ರೋಹದ ಆರೋಪ ಎದುರಿಸುತ್ತಿರುವ ಇತರ ಐವರು ವಿದ್ಯಾರ್ಥಿಗಳು ರವಿವಾರ ಕ್ಯಾಂಪಸ್ಸಿಗೆ ಹಿಂದಿರುಗಿದ್ದರೂ ಅವರನ್ನು ಇಲ್ಲಿವರೆಗೆ ಬಂಧಿಸಲಾಗಿಲ್ಲ.
ಕೆಲವು ಟಿವಿ ವಾಹಿನಿಗಳು ಪ್ರಸಾರ ಮಾಡಿದ್ದ ಕಾರ್ಯಕ್ರಮದ್ದೆಂದು ಹೇಳಲಾದ ವೀಡಿಯೋ ದೃಶ್ಯಾವಳಿಗಳ ಆಧಾರದಲ್ಲಿ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಕನ್ಹಯ್ಯ ಸೇರಿದಂತೆ ಕೆಲವು ವಿದ್ಯಾರ್ಥಿಗಳನ್ನು ದೇಶದ್ರೋಹಿಗಳಂತೆ ಬಿಂಬಿಸಲು ವೀಡಿಯೋವನ್ನು ದುರುಪಯೋಗಪಡಿಸಲಾಗಿದೆಯೆಂದು ಆರೋಪಿಸಿ ಝೀ ನ್ಯೂಸ್ ಪತ್ರಕರ್ತ ವಿಶ್ವ ದೀಪಕ್ ಕಳೆದ ವಾರ ರಾಜೀನಾಮೆ ನೀಡಿದ್ದರು. ತರುವಾಂು ಶನಿವಾರದಂದು ದೆಹಲಿ ಸರಕಾರ ಜೆಎನ್‌ಯು ಕಾರ್ಯಕ್ರಮದ್ದೆಂದು ಹೇಳಲಾಗಿರುವ ಐದು ವೀಡಿಯೋ ದೃಶ್ಯಾವಳಿಗಳ ಸತ್ಯಾಸತ್ಯತೆಯನ್ನು ಅರಿಯಲು ಅವುಗಳನ್ನು ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಿದೆ.





