ಬಂಟ್ವಾಳ: ಜಿಪಂ, ತಾಪಂ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ

ಬಂಟ್ವಾಳ: ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ಗೆ ಶನಿವಾರ ನಡೆದ ಚುನಾವಣೆಗಳ ಫಲಿತಾಂಶ ಹೊರ ಬಿದ್ದಿದ್ದು, ತಾಲೂಕಿನ 9 ಜಿಪಂ ಕ್ಷೇತ್ರಗಳ ಪೈಕಿ 5 ಜಿಪಂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ 4 ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ.ಭಾರೀ ಕುತೂಹಲ ಕೆರಳಿಸಿದ್ದ ಸಜಿಪಮುನ್ನೂರು ಹಾಗೂ ಕೊಳ್ನಾಡು ಜಿಪಂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ನಾಯಕರ ಲೆಕ್ಕಾಚಾರವನ್ನು ಬುಡಮೇಲುಗೊಳಿಸಿದೆ. ಸಂಗಬೆಟ್ಟು ಜಿಪಂ ಕ್ಷೇತ್ರ ಹಾಗೂ ಪುದು ಜಿಪಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಅಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ತಾಲೂಕಿನ ಕೊಳ್ನಾಡು ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಮ್.ಎಸ್.ಮುಹಮ್ಮದ್, ಸಜಿಪಮುನ್ನೂರು ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ರಕಾಶ್ ಶೆಟ್ಟಿ, ಕುರ್ನಾಡು ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಮತಾ ಗಟ್ಟಿ, ಸರಪಾಡಿ ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮಶೇಖರ್ ಜೈನ್, ಮಾಣಿ ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುಳಾಮಾದವ ಮಾವೆ ಗೆಲುವು ಸಾಧಿಸಿದರೆ, ಗೊಳ್ತಮಜಲು ಜಿಪಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಮಲಾಕ್ಷಿ ಪೂಜಾರಿ, ಪುಣಚ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯಶ್ರೀ ಕೊಡಂದೂರು, ಪುದು ಜಿಪಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಂದ್ರ ಕಂಬಳಿ, ಸಂಗಬೆಟ್ಟು ಜಿಪಂ ಕ್ಷೇತ್ರದ ತುಂಗಪ್ಪ ಬಂಗೇರ ಗೆಲುವು ಸಾಧಿಸಿದ್ದಾರೆ. ತಾಲೂಕು ಪಂಚಾಯತ್: 34 ತಾಲೂಕು ಪಂಚಾಯತ್ ಕ್ಷೇತ್ರಗಳ ಪೈಕಿ 22 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, 12 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.





