ಮೂಡುಬಿದಿರೆ : ಜಿ.ಪಂ, ತಾ.ಪಂ ಚುನಾವಣೆ : ಸಚಿವ ಅಭಯಚಂದ್ರಗೆ ಸೋಲು

ಮೂಡುಬಿದಿರೆ : ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಮೂಡುಬಿದಿರೆ ಹೋಬಳಿಯ ಪುತ್ತಿಗೆ, ಶಿರ್ತಾಡಿ ಜಿ.ಪಂಚಾಯತ್ ಮತ್ತು 7 ತಾಲೂಕು ಪಂಚಾಯತ್ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗುವ ಮೂಲಕ ಸಚಿವ ಅಭಯಚಂದ್ರ ಜೈನ್ ಅವರು ಸೋಲಿನ ಹೊಣೆಯನ್ನು ಹೊತ್ತಿದ್ದಾರೆ. ಕಳೆದ ವಾರದಲ್ಲಿ ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಅಭಯಚಂದ್ರ ಜೈನ್ ಅವರು ಪುತ್ತಿಗೆ ಮತ್ತು ಶಿರ್ತಾಡಿ ಜಿ.ಪಂ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳು ಖಂಡಿತವಾಗಿ ಗೆಲ್ಲುತ್ತಾರೆ. ಒಂದು ವೇಳೆ ಅವರುಗಳು ಸೋತರೆ ಆ ಸೋಲು ಅವರದ್ದಲ್ಲ ಬದಲಾಗಿ ಆ ಸೋಲಿಗೆ ಕಾರಣ ನಾನು ಆದ್ದರಿಂದ ನಾನೇ ಸೋಲಿನ ಹೊಣೆಗೆ ಜವಾಬ್ದಾರ ಎಂದು ಹೇಳಿದ್ದರು. ಇದೀಗ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ 5 ಜಿ.ಪಂ ಕ್ಷೇತ್ರದಲ್ಲಿ ಮತ್ತು ತಾ.ಪಂ ಕ್ಷೇತ್ರದಲ್ಲಿಯೂ ಹೆಚ್ಚಿನ ಕಡೆಗಳಲ್ಲಿ ಕಮಲದ ಹೂ ಅರಳಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ. 2010ರಲ್ಲಿ ನಡೆದ ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಪುತ್ತಿಗೆ ಕ್ಷೇತ್ರದಲ್ಲಿ ಬಿಜೆಪಿಯ ಸುನೀತಾ ಸುಚರಿತ ಶೆಟ್ಟಿ ಆಯ್ಕೆಯಾಗಿದ್ದರೆ, ಶಿರ್ತಾಡಿಯಲ್ಲಿ ಕಾಂಗ್ರೆಸ್‌ನ ಅಂಬಿಕಾ ಡಿ.ಶೆಟ್ಟಿ ಅವರು ವಿಜಯಿಯಾಗಿದ್ದರು.
ಕಾಂಗ್ರೆಸ್ ವಿಜಯಿ : ತಾ.ಪಂ ಕ್ಷೇತ್ರದಲ್ಲಿ ಹೊಸಬೆಟ್ಟುವಿನಲ್ಲಿ ಕಾಂಗ್ರೆಸ್ (ಹಿಂದಿನ ಸಾಲಿನಲ್ಲೂ) ರೀಟಾ ಕುಟಿನ್ಹಾ, ಪಡುಮಾರ್ನಾಡಿನಲ್ಲಿ ಮತ್ತೊಮ್ಮೆ ಕಾಂಗ್ರೆಸ್ (ಪ್ರಶಾಂತ್ ಅಮೀನ್) ಹಾಗೂ ತೆಂಕಮಿಜಾರಿನಲ್ಲಿ ಕಾಂಗ್ರೆಸ್ (ಪ್ರಕಾಶ್ ಗೌಡ) ವಿಜಯಿಯಾಗಿದ್ದಾರೆ. ಬಿಜೆಪಿ ವಿಜಯಿ: ಈ ಬಾರಿ ಪಾಲಡ್ಕದಲ್ಲಿ ಮತ್ತೊಮ್ಮೆ ಬಿಜೆಪಿ (ವನಿತಾ ನಾಯ್ಕೆ ), ಬೆಳುವಾಯಿ (ಸಂತೋಷ್), ಶಿರ್ತಾಡಿ (ಸುಜಾತ) ಹಾಗೂ ಮೊದಲ ಬಾರಿ ಅಸ್ತಿತ್ವಕ್ಕೆ ಬಂದಿರುವ ನೆಲ್ಲಿಕಾರು ಗ್ರಾ.ಪಂ ನಲ್ಲಿ ಬಿಜೆಪಿಯ ರೇಖಾ ಸಾಲ್ಯಾನ್ ವಿಜಯಿಯಾಗುವ ಮೂಲಕ ಒಟ್ಟು ನಾಲ್ಕು ಪಂಚಾಯತ್‌ಗಳಲ್ಲಿ ಬಿಜೆಪಿ ಪ್ರಾಬಲ್ಯವನ್ನು ಮೆರೆದಿದೆ. ಆದರೆ ಈ ಹಿಂದೆ ತನ್ನ ತೆಕ್ಕೆಯಲ್ಲಿದ್ದ ತೆಂಕಮಿಜಾರು ತಾ.ಪಂನ್ನು ಕಳೆದುಕೊಂಡಿದೆ. ಈ ಮೂಲಕ ಬಿಜೆಪಿಯು ಗೆದ್ದು, ಕಾಂಗ್ರೆಸ್‌ಗೆ ಸೋಲುನಿಸಿದೆ.
ನಿರೀಕ್ಷಿತ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲು : ಪಡುಮಾರ್ನಾಡು ಮತ್ತು ಹೊಸಬೆಟ್ಟು ತಾ.ಪಂ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಗಳು ಗೆಲುವಿನ ಅತೀ ನಿರೀಕ್ಷೆಯಲ್ಲಿದ್ದರು. ಆದರೆ ಈ ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ.







