ಮುಂಬೈ ದಾಳಿಯಲ್ಲಿ ಐಎಸ್‌ಐ ಪಾತ್ರ ಒಪ್ಪಿದ್ದ ಮಾಜಿ ಮುಖ್ಯಸ್ಥ
ನೂತನ ಪುಸ್ತಕದಲ್ಲಿ ಮಾಜಿ ಸಿಐಎ ಮುಖ್ಯಸ್ಥ ಬಹಿರಂಗ

ವಾಶಿಂಗ್ಟನ್, ಫೆ. 23: 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾದವರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಯ ಕೆಲವು ನಿವೃತ್ತ ಸದಸ್ಯರು ತರಬೇತಿ ನೀಡಿದ್ದರು ಎಂಬುದನ್ನು ದಾಳಿಯ ಸ್ವಲ್ಪವೇ ಸಮಯದ ಬಳಿಕ ಐಎಸ್‌ಐಯ ಅಂದಿನ ಮುಖ್ಯಸ್ಥ ಒಪ್ಪಿಕೊಂಡಿದ್ದರು.
ಈ ವಿಷಯವನ್ನು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಯ ಮಾಜಿ ನಿರ್ದೇಶಕ ಮೈಕಲ್ ಹೇಡನ್ ತನ್ನ ನೂತನ ಪುಸ್ತಕ ‘ಪ್ಲೇಯಿಂಗ್ ಟು ದ ಎಜ್’ನಲ್ಲಿ ಹೇಳಿದ್ದಾರೆ.
ಆದಾಗ್ಯೂ, ದಾಳಿ ನಡೆಸಿದ ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದ್ದರು ಎಂದಿದ್ದಾರೆ.
ಅಲ್-ಖಾಯಿದ, ತಾಲಿಬಾನ್, ಎಲ್‌ಇಟಿ ಮತ್ತು ಹಕ್ಕಾನಿ ನೆಟ್‌ವರ್ಕ್ ಮುಂತಾದ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ವಿಷಯದಲ್ಲಿ ಪಾಕಿಸ್ತಾನಿ ನಾಯಕತ್ವದ ‘‘ಎಡೆಬಿಡಂಗಿತನ’’ದ ಬಗ್ಗೆ ಅವರು ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನಿ ಸೇನೆಯನ್ನು ಕಟ್ಟಿರುವುದು ಭಾರತದ ವಿರುದ್ಧ ಯುದ್ಧ ಮಾಡುವುದಕ್ಕೇ ಹೊರತು ಭಯೋತ್ಪಾದಕರ ವಿರುದ್ಧ ಹೋರಾಡುವುದಕ್ಕಲ್ಲ ಎಂಬುದನ್ನು ದೇಶದ ಉನ್ನತ ನಾಯಕತ್ವ, ಅದರಲ್ಲೂ ಮುಖ್ಯವಾಗಿ ಸೇನಾ ನಾಯಕತ್ವ ಕಳೆದ ಒಂದು ದಶಕದ ಅವಧಿಯಲ್ಲಿ ಪದೇ ಪದೇ ಹೇಳುತ್ತಲೇ ಬಂದಿದೆ ಎಂದು ಸಿಐಎ ಮಾಜಿ ಮುಖ್ಯಸ್ಥ ಬರೆದಿದ್ದಾರೆ. ಬುಡಕಟ್ಟು ವಲಯಗಳಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಕಾರ್ಯಾಚರಣೆ ನಡೆಸುವಲ್ಲಿನ ತನ್ನ ಅಸಮರ್ಥತೆಯನ್ನು ಪಾಕ್ ನಾಯಕತ್ವ ವ್ಯಕ್ತಪಡಿಸುತ್ತಲೆ ಬಂದಿದೆ ಎಂದಿದ್ದಾರೆ.
ಮುಂಬೈ ಭಯೋತ್ಪಾದಕ ದಾಳಿ ಬಗ್ಗೆ ಪ್ರಸ್ತಾಪಿಸುವ ಹೇಡನ್, ಈ ಆಕ್ರಮಣದಲ್ಲಿ ಪಾಕಿಸ್ತಾನದ ಹಲವು ಕೈಗಳು ಶಾಮೀಲಾಗಿದ್ದವು ಎನ್ನುವುದು ಅತ್ಯಂತ ಸ್ಪಷ್ಟ ಎಂದರು. ಅವರು 2009ರವರೆಗೆ ಸಿಐಎ ಮುಖ್ಯಸ್ಥನಾಗಿದ್ದರು.
‘‘ದಾಳಿಯ ಮೂಲಕ್ಕೆ ಹೋಗಿ ಹಾಗೂ ಆ ಬಗ್ಗೆ ನಮ್ಮೆಂದಿಗೆ ಮುಕ್ತವಾಗಿ ಚರ್ಚಿಸಿ ಎಂಬುದಾಗಿ ಐಎಸ್‌ಐ ಮುಖ್ಯಸ್ಥರನ್ನು ನಾನು ಫೋನ್‌ನಲ್ಲಿ ಪದೇ ಪದೇ ಒತ್ತಾಯಿಸುತ್ತಿದ್ದೆ’’ ಎಂದು ಮಾಜಿ ಸಿಐಎ ಮುಖ್ಯಸ್ಥ ತನ್ನ ಪುಸ್ತಕದಲ್ಲಿ ಹೇಳಿದ್ದಾರೆ.
‘‘ದಾಳಿ ನಡೆಸಿದ್ದು ಲಷ್ಕರೆ ತಯ್ಯಬ ಎಂಬ ವಿಷಯದಲ್ಲಿ ನಮ್ಮಲ್ಲಿ ಯಾವುದೇ ಸಂಶಯವಿರಲಿಲ್ಲ. ದಾಳಿಗೆ ಸಿದ್ಧತೆ ಮತ್ತು ಸೂಚನೆ ಪಾಕಿಸ್ತಾನದಲ್ಲೇ ಏರ್ಪಟ್ಟಿತ್ತು ಎಂಬುದಕ್ಕೆ ಬಲವಾದ ಪುರಾವೆಯಿದೆ. ಪಾಕಿಸ್ತಾನದಲ್ಲಿ ಲಷ್ಕರೆ ತಯ್ಯಬಕ್ಕೆ ಐಎಸ್‌ಐ ರಕ್ಷಣೆ ಮತ್ತು ಬೆಂಬಲ ನೀಡುತ್ತಿದೆ’’ ಎಂದು ಹೇಡನ್ ಹೇಳಿದ್ದಾರೆ.







