ಮೃತ ನೌಕರನ ನಿವೃತ್ತಿ ಸೌಲಭ್ಯ
2ನೆ ಪತ್ನಿಗೆ ನೀಡಲು ಹೈಕೋರ್ಟ್ ಅಸ್ತು
ಮುಂಬೈ, ಫೆ.23: ಕೇಂದ್ರ ಸರಕಾರಿ ಮೃತ ನೌಕರನೊಬ್ಬ ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಿರುವ ನೆಲೆಯಲ್ಲಿ, ಆತನ ನಿವೃತ್ತಿ ಸೌಲಭ್ಯವನ್ನು ಪಡೆಯಲು ಅವಕಾಶ ನೀಡುವಂತೆ ಮೃತನ 2ನೆಯ ಹೆಂಡತಿ ಮಾಡಿದ್ದ ಮನವಿಯ ಪರವಾಗಿ ಸಿಎಟಿ ನೀಡಿದ್ದ ತೀರ್ಪನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ.
ಮೃತ ನೌಕರನು ಪುಣೆಯ ಸಮೀಪದ ಖಡ್ಕಿಯ ಮದ್ದುಗುಂಡು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಆತ 2010ರ ಜನವರಿಯಲ್ಲಿ ಮೃತನಾಗಿದ್ದನು. ತನ್ನ ನಿವೃತ್ತಿ ಸೌಲಭ್ಯ ಪಡೆಯಲು ವಿಚ್ಛೇದಿತ ಪತ್ನಿಯನ್ನು ನಾಮ ನಿರ್ದೇಶನಗೊಳಿಸಿದ್ದುದನ್ನು ರದ್ದುಪಡಿಸಿದ್ದ ಮೃತ ನೌಕರ, 2ನೆ ಪತ್ನಿಯನ್ನು ನಾಮಾಂಕನಗೊಳಿಸಿದ್ದನು.
2013ರ ಸೆಪ್ಟಂಬರ್‌ನಲ್ಲಿ, ನಿವೃತ್ತಿ ಸೌಲಭ್ಯ ಪಡೆಯಲು 2ನೆ ಹೆಂಡತಿ ಮಾಡಿದ್ದ ಮನವಿಯನ್ನು ಕೇಂದ್ರಿಯ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ) ಪುರಸ್ಕರಿಸಿತ್ತು. ಈ ಆದೇಶದಿಂದ ಅಸಮಾಧಾನಿತಳಾಗಿದ್ದ ಮೊದಲ ಮಡದಿ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಳು.
ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಜಿ.ಎಚ್.ವೇಲಾ ಹಾಗೂ ನ್ಯಾಯಮೂರ್ತಿ ವಿ.ಕೆ.ತಹಿಲ್ರಮಣಿ, ಮೊದಲ ಪತ್ನಿಯ ಪರವಾಗಿ ಮಾಡಿದ್ದ ನಾಮಾಂಕನವನ್ನು ರದ್ದುಗೊಳಿಸಲಾಗಿದೆ ಹಾಗೂ ಮರಣ ಹಾಗೂ ನಿವೃತ್ತಿಯ ಬಳಿಕದ ಪಿಂಚಣಿ, ಭವಿಷ್ಯ ನಿಧಿ ಹಾಗೂ ಗುಂಪು ವಿಮಾ ಯೋಜನೆಗಳ ಲಾಭವನ್ನು ಎರಡನೆ ಪತ್ನಿಯ ಪರವಾಗಿ ಪ್ರತ್ಯೇಕವಾಗಿ ಹೊಸ ನಾಮಾಂಕನದ ಮೂಲಕ ದಾಖಲಿಸಿದ್ದನೆಂಬ ವಾಸ್ತವವನ್ನು ಇಲ್ಲಿ ಗಮನಿಸಬೇಕಾಗಿದೆ. ನೌಕರನು ಸಾಯುವುದಕ್ಕೆ ಬಹಳ ಮೊದಲೇ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ ಹಾಗೂ ನಿಖಾನಾಮಾದ ದಾಖಲೆಗಳನ್ನು, 2ನೆ ಪತ್ನಿಯ ನಾಮನಿದೇರ್ಶನ ಅರ್ಜಿಯೊಂದಿಗೆ ಸಲ್ಲಿಸಿದ್ದನು. ಆದುದರಿಂದ 2ನೆ ಪತ್ನಿ ಸಲ್ಲಿಸಿರುವ ಮನವಿಯನ್ನು ಪೀಠವು ಪುರಸ್ಕರಿಸುತ್ತದೆ ಎಂದಿದ್ದಾರೆ.







