‘ಯೇಸುಕ್ರಿಸ್ತ ತಮಿಳು ಹಿಂದೂ!’ ಸಾವರ್ಕರ್ ಸಹೋದರನ ವಿವಾದಾತ್ಮಕ ಕೃತಿ ಮರುಪ್ರಕಟಣೆ
ಮುಂಬೈ,ಫೆ.23: ಯೇಸುಕ್ರಿಸ್ತ ಮೂಲತಃ ಓರ್ವ ತಮಿಳು ಹಿಂದೂವಾಗಿದ್ದನೆಂದು, ಹಿಂದೂ ಮಹಾಸಭಾದ ಸ್ಥಾಪಕ ವಿ.ಡಿ.ಸಾವರ್ಕರ್ ಅವರ ಸಹೋದರ ಬರೆದಿದ್ದ ವಿವಾದಾತ್ಮಕ ಪುಸ್ತಕವೊಂದು 70 ವರ್ಷಗಳ ಬಳಿಕ ಮರುಪ್ರಕಟವಾಗಲಿದೆ.
ಸಾವರ್ಕರ್ ಅವರ ಹಿರಿಯ ಸಹೋದರ ಗಣೇಶ್ ಸಾವರ್ಕರ್ ಬರೆದಿರುವ ಈ ಪುಸ್ತಕವು ಹಿಂದೂಮಹಾಸಭಾ ಸ್ಥಾಪಕನ ಪುಣ್ಯತಿಥಿಯ ದಿನವಾದ ಫೆಬ್ರವರಿ 26ರಂದು ಮರುಬಿಡುಗಡೆಯಾಗಲಿದೆ ಎಂದು, ಸ್ವಾತಂತ್ರವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಅಧ್ಯಕ್ಷ ರಂಜಿತ್ ಸಾವರ್ಕರ್ ತಿಳಿಸಿದ್ದಾರೆ. 1946ರಲ್ಲಿ ಪ್ರಕಟವಾಗಿದ್ದ ಈ ಕೃತಿಯು ಕ್ರೈಸ್ತ ಧರ್ಮವು ಮೂಲತಃ ಒಂದು ಹಿಂದೂ ಪಂಥವಾಗಿತ್ತು ಹಾಗೂ ಯೇಸುಕ್ರಿಸ್ತನು ಕಾಶ್ಮೀರದಲ್ಲಿ ಸಾವನ್ನಪ್ಪಿದ್ದನೆಂದು ಹೇಳಿಕೊಂಡಿದೆ.
ಶಿಲುಬೆಗೇರಿಸಲ್ಪಟ್ಟ ಯೇಸುಕ್ರಿಸ್ತನನ್ನು ಎಸ್ಸೆನೆ ಎಂಬ ಪಂಗಡದವರು ಹಿಮಾಲಯದ ಔಷಧಿಗಿಡಗಳು ಹಾಗೂ ಗಿಡಮೂಲಿಕೆಗಳಿಂದ ಕಾಪಾಡಿದ್ದರು. ಕ್ರಿಸ್ತನು ಕಾಶ್ಮೀರದಲ್ಲಿ ಸಮಾಧಿಹೊಂದಿದನೆಂದು ಪುಸ್ತಕವು ಪ್ರತಿಪಾದಿಸಿದೆ. ಯೇಸುಕ್ರಿಸ್ತನು ಹುಟ್ಟಿನಿಂದ ವಿಶ್ವಕರ್ಮ ಬ್ರಾಹ್ಮಣನೆಂದು ಮರಾಠಿಭಾಷೆಯ ಈ ಪುಸ್ತಕವು ಹೇಳಿದೆ.
ಕ್ರೈಸ್ತನ ನಿಜನಾಮಧೇಯ ಕೇಶವ ಕೃಷ್ಣ ಎಂದಾಗಿದ್ದು, ತಮಿಳು ಆತನ ಮಾತೃಭಾಷೆಯಾಗಿತ್ತು ಹಾಗೂ ಆತ ಕಪ್ಪಾಗಿದ್ದನೆಂದು ಕೃತಿ ಹೇಳಿದೆ. ಈ ಪುಸ್ತಕದ ವಾದಗಳನ್ನು ಮುಂಬೈನ ಹಿರಿಯ ಕ್ರೈಸ್ತ ಧರ್ಮಗುರು ವಾರ್ನರ್ ಡಿಸೋಜಾ ತಳ್ಳಿಹಾಕಿದ್ದಾರೆ.







