ರಾಹುಲ್ ಶಿರಚ್ಛೇದಕ್ಕೆ ಕರೆ ಕೊಟ್ಟ ಬಿಜೆಪಿ ಮುಖಂಡನ ವಿರುದ್ಧ ದೂರು
ಡೆಹ್ರಾಡೂನ್,ಫೆ.23: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿಯ ‘ಶಿರಚ್ಛೇದನ ಮಾಡಿ, ಅವರ ತಲೆಯನ್ನು ಜೆಎನ್‌ಯು ವಿವಿಯ ಮುಖ್ಯದ್ವಾರದಲ್ಲಿ ನೇತುಹಾಕಬೇಕು’ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಉಧಂಪುರದ ಬಿಜೆಪಿ ನಾಯಕ ಜಗತಾರ್‌ಸಿಂಗ್ ಬಾಜ್ವಾ ವಿರುದ್ಧ ದೂರೊಂದು ದಾಖಲಾಗಿದೆ. ಮೂರು ದಿನಗಳ ಹಿಂದೆ ಜಗತಾರ್‌ಸಿಂಗ್ ಮಾಡಿದ್ದಾರೆನ್ನಲಾದ ಈ ಪ್ರಚೋದನಕಾರಿ ಭಾಷಣದ ವಿಡಿಯೋ ಪೊಲೀಸರಿಗೆ ಲಭ್ಯವಾಗಿದೆ.
ಜನರನ್ನು ಕೆರಳಿಸಲು ಹಾಗೂ ಗಲಭೆಯುಂಟು ಮಾಡುವ ಉದ್ದೇಶದಿಂದ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಬಾಜ್ವಾ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಜೆಪಿ ನಾಯಕನ ವಿವಾದಿತ ಭಾಷಣಕ್ಕೆ ಸಂಬಂಧಿಸಿ ತನಿಖೆಯನ್ನು ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಪ್ರಸ್ತುತ ಬಾಝ್ವಾರ ಭಾಷಣದ ವೀಡಿಯೊ ಹಾಗೂ ಆಡಿಯೋ ಪ್ರತಿಗಳನ್ನು ಪರಿಶೀಲಿಸುತ್ತಿದ್ದಾರೆ. ಉತ್ತರಖಂಡದ ಉಧಂಪುರ ಜಿಲ್ಲೆಯಲ್ಲಿ ಬಿಜೆಪಿ ಉಪಾಧ್ಯಕ್ಷರಾದ ಬಾಜ್ವಾ ಶನಿವಾರ ಮಾಡಿದ ಭಾಷಣವೊಂದರಲ್ಲಿ ರಾಹುಲ್‌ಗಾಂಧಿಯ ಶಿರಚ್ಛೇದನ ಮಾಡಿದ ಯುವಜನರನ್ನು ಪೂಜಿಸಲಾಗುವುದು ಹಾಗೂ ಅವರ ಹೆಸರಿನಲ್ಲಿ ದೇಗುಲವೊಂದನ್ನು ನಿರ್ಮಿಸಲಾಗುವದೆಂದು ಏಳಿದ್ದರು.
ಈ ಮಧ್ಯೆ ಬಾಜ್ವಾ ಅವರ ಹೇಳಿಕೆಯನ್ನು ಉತ್ತರಖಂಡ ಮುಖ್ಯಮಂತ್ರಿ ಹರೀಶ್‌ರಾವತ್ ಬಲವಾಗಿ ಖಂಡಿಸಿದ್ದಾರೆ. ಬಿಜೆಪಿ ವ್ಯವಸ್ಥಿತವಾಗಿ ದ್ವೇಷ ಹಾಗೂ ಅಸಹಿಷ್ಣುತೆಯ ವಾತಾವರಣವನ್ನು ಸೃಷ್ಟಿಸುತ್ತಿದೆಯೆಂದು ಅವರು ಆಪಾದಿಸಿದ್ದರು.





