‘ತನಿಖೆ ಸಂಸ್ಥೆಯನ್ನು ಬದಲಿಸುವ ಅಧಿಕಾರ ಉನ್ನತ ನ್ಯಾಯಾಲಯಗಳಿಗೆ ಮಾತ್ರ’
ಮಧುರೆ, ಫೆ.23: ಕ್ರಿಮಿನಲ್ ಪ್ರಕರಣಗಳಲ್ಲಿ ತನಿಖೆ ಸಂಸ್ಥೆಯನ್ನು ಬದಲಾಯಿಸುವಂತೆ ನ್ಯಾಯಾಂಗ ದಂಡಾಧಿಕಾರಿಗಳು ಆದೇಶಿಸುವಂತಿಲ್ಲ. ಅಂತಹ ಅಧಿಕಾರ ಕೇವಲ ಉನ್ನತ ನ್ಯಾಯಾಲಯಗಳಿಗೆ ಮಾತ್ರವಿದೆಯೆಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ನ್ಯಾಯಾಂಗ ದಂಡಾಧಿಕಾರಿಗಳಿಗೆ ಸ್ಥಳೀಯ ಪೊಲೀಸರ ತನಿಖೆ ತೃಪ್ತಿ ತಾರದಿದಲ್ಲಿ. ಅವರು ಹೆಚ್ಚೆಂದರೆ, ಹೆಚ್ಚಿನ ತನಿಖೆಗೆ ಆದೇಶಿಸಬಹುದು. ಆದರೆ, ಅಪರಾಧ ಶಾಖೆಯ ಅಪರಾಧ ತನಿಖೆ ಇಲಾಖೆಯಂತಹ (ಸಿಬಿ-ಸಿಐಡಿ) ಬೇರೆ ಸಂಸ್ಥೆಗಳಿಗೆ ತನಿಖೆ ನಡೆಸುವಂತೆ ಆದೇಶಿಸುವ ಹಾಗಿಲ್ಲವೆಂದು ಮಧುರೆ ಪೀಠದ ನ್ಯಾಯಮೂರ್ತಿ ಸಿ.ಟಿ.ಸೆಲ್ವಂ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.
62ರ ಹರೆಯದ ವ್ಯಕ್ತಿಯೊಬ್ಬ ದಾಖಲಿಸಿದ್ದ ಕ್ರಿಮಿನಲ್ ದೂರೊಂದರ ತನಿಖೆ ನಡೆಸುವಂತೆ ದಂಡಾಧಿಕಾರಿಯೊಬ್ಬರು ಆದೇಶಿಸಿದ್ದುದನ್ನು ಪ್ರಶ್ನಿಸಿ ತಿರುಚಿರಾಪಳ್ಳಿಯ ಸಿಬಿ-ಸಿಐಡಿ ಸಲ್ಲಿಸಿದ್ದ ಅರ್ಜಿಯೊಂದರ ಸಂಬಂಧ ಅವರು ಈ ತೀರ್ಪು ನೀಡಿದ್ದಾರೆ.
ಪೀಠವು, ದಂಡಾಧಿಕಾರಿಯ ಆದೇಶ, ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಹಾಗೂ ಅದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ರದ್ದುಗೊಳಿಸಿದೆ.





