ಮಾನವಹಕ್ಕು ಆಯೋಗಕ್ಕೆ ಎಚ್.ಎಲ್.ದತ್ತು ಅಧ್ಯಕ್ಷ
ಹೊಸದಿಲ್ಲಿ, ಫೆ. 23: ರಾಷ್ಟ್ರೀಯ ಮಾನವಹಕ್ಕು ಆಯೋಗ (ಎನ್‌ಎಚ್‌ಆರ್‌ಸಿ)ದ ನೂತನ ಅಧ್ಯಕ್ಷರಾಗಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯೊಂದು ಈ ಹುದ್ದೆಗೆ ದತ್ತು ಅವರ ಹೆಸರನ್ನು ಅಂತಿಮಗೊಳಿಸಿದೆ. ಎನ್‌ಎಚ್‌ಆರ್‌ಸಿ ಅಧ್ಯಕ್ಷರಾಗಿದ್ದ ಕೆ.ಜಿ.ಬಾಲಕೃಷ್ಣನ್ ನಿವೃತ್ತಿಯಾದ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಈ ಹುದ್ದೆ ಖಾಲಿ ಬಿದ್ದಿತ್ತು.
ಸಮಿತಿಯ ಸಭೆಯಲ್ಲಿ ಪ್ರಧಾನಿ ಜೊತೆಗೆ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಹಾಗೂ ರಾಜ್ಯಸಭೆಯ ಉಪಾಧ್ಯಕ್ಷ ಪಿ.ಜೆ. ಕುರಿಯನ್ ಪಾಲ್ಗೊಂಡಿದ್ದರು. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿರಲಿಲ್ಲ.
ಮೂಲತಃ ಕರ್ನಾಟಕದವರಾದ 65 ವರ್ಷ ವಯಸ್ಸಿನ ದತ್ತು, ಕಳೆದ ವರ್ಷದ ಡಿಸೆಂಬರ್ 2ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು. ಎನ್‌ಎಚ್‌ಆರ್‌ಸಿ ಅಧ್ಯಕ್ಷರಾಗಿ ಅವರು 5 ವರ್ಷಗಳ ಅಧಿಕಾರಾವಧಿ ಹೊಂದಿದ್ದಾರೆ. ಎನ್‌ಎಚ್‌ಆರ್‌ಸಿ ಅಧ್ಯಕ್ಷರಾಗಿ ದತ್ತು ಅವರ ಹೆಸರನ್ನು ರಾಷ್ಟ್ರಪತಿಯವರ ಅಂಗೀಕಾರಕ್ಕಾಗಿ ಕಳುಹಿಸಿಕೊಡಲಾಗಿದೆ.





