ನಾಲ್ವರು ಮಕ್ಕಳೊಂದಿಗೆ ಮುಖ್ಯ ಶಿಕ್ಷಕಿ ಆತ್ಮಹತ್ಯೆ
ಅಳಿಯನ ಕಿರುಕುಳ ಆರೋಪ
ನಾಗಮಂಗಲ, ಫೆ.23: ಮನೆ ಅಳಿಯನ ಕಿರುಕುಳ ತಾಳಲಾರದೆ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ತನ್ನ ನಾಲ್ವರು ಮಕ್ಕಳ ಸಮೇತ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ತಾಲೂಕಿನ ಮಾರದೇವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಾಗತಿಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮೀನಾಕ್ಷಮ್ಮ (50), ಮಕ್ಕಳಾದ ಯೋಗಶ್ರೀ (25), ಪದ್ಮಾ (22), ಸುಚಿತ್ರಾ (18) ಹಾಗೂ ವಿಕಲ ಚೇತನ ಪುತ್ರ ಸೂರ್ಯ (14) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಮೊದಲು ವಿಕಲಚೇತನ ಸೂರ್ಯನ ಕತ್ತು ಹಿಸುಕಿ ಸಾಯಿಸಿರುವ ಇತರ ನಾಲ್ಕು ಮಂದಿ ನಂತರ, ನೇಣು ಬಿಗಿದುಕೊಂಡು ಸೋಮವಾರ ತಡರಾತ್ರಿ ಸಾವನ್ನಪ್ಪಿದ್ದು, ಮಂಗಳವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಯೋಗಶ್ರೀಗೆ ಕಳೆದ ನಾಲ್ಕು ತಿಂಗಳ ಹಿಂದೆ ತುಮಕೂರು ಜಿಲ್ಲೆ ಕಡಬ ಗ್ರಾಮದ ಉಮೇಶ್ ಎಂಬಾತನ ಜತೆ ಮದುವೆಯಾಗಿದ್ದು, ಆತನ ನಡತೆ ಸರಿಯಿಲ್ಲದ ಕಾರಣ ಯೋಗಶ್ರೀ ತವರು ಮನೆಯಲ್ಲೇ ಇದ್ದರು ಎನ್ನಲಾಗಿದೆ.
ಉಮೇಶ್ ಬೇರೆ ಹೆಂಗಸಿನ ಜೊತೆ ಅನೈತಿಕ ಸಂಬಂಧ ಹೊಂದಿದ್ದಲ್ಲದೆ, ಯೋಗಶ್ರೀ ಕುಟುಂಬದ ಆಸ್ತಿಯ ಮೇಲೆ ಕಣ್ಣಿಟ್ಟಿದ್ದು, ಇದಕ್ಕಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದನ್ನು ಸಹಿಸದೆ ತಾವು ಆತ್ಮಹತ್ಯೆ ಮಾಡಿಕೊಂಡಿದ್ದೇವೆ ಎಂದು ಮೀನಾಕ್ಷಿ ಮತ್ತು ಮಕ್ಕಳು ಡೆತ್‌ನೋಟ್ ಬರೆದಿಟ್ಟಿದ್ದಾರೆ.
ಅಳಿಯನ ಕಿರುಕುಳ ತಾಳದೆ ಮೀನಾಕ್ಷಮ್ಮನ ಪತಿ ರಾಮೇಗೌಡ ಎರಡು ತಿಂಗಳ ಹಿಂದೆಯಷ್ಟೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎನ್ನಲಾಗಿದ್ದು, ತಮ್ಮ ಸಮಸ್ತ ಆಸ್ತಿಯನ್ನು ಶ್ರೀರಂಗಪಟ್ಟಣದ ಸಾಯಿಬಾಬ ಆಶ್ರಮಕ್ಕೆ ನೀಡಬೇಕೆಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





