ಜನರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಸಫಲ: ಸಿದ್ದರಾಮಯ್ಯ
ಜಿಪಂ-ತಾಪಂ ಫಲಿತಾಂಶ

ಬೆಂಗಳೂರು, ಫೆ.23: ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಫಲಿತಾಂಶದಿಂದ ಕಾಂಗ್ರೆಸ್ ಸರಕಾರ ಜನರ ವಿಶ್ವಾಸವನ್ನು ಉಳಿಸಿಕೊಳ್ಳಲು ಸಫಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ನಗರದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಒಟ್ಟು 15 ರಿಂದ 20 ಜಿಲ್ಲೆಗಳು ಕಾಂಗ್ರೆಸ್ ತೆಕ್ಕೆಗೆ ಬರಲಿವೆ ಎಂದು ನಿರೀಕ್ಷಿಸಲಾಗಿತ್ತು. ಅದು ಸಾಧ್ಯವಾಗದಿದ್ದರೂ ಜನರು ಸರಕಾರದ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿಲ್ಲ ಎಂಬುದನ್ನು ಈ ಫಲಿತಾಂಶ ನಮಗೆ ತೋರಿಸಿದೆ ಎಂದು ತಿಳಿಸಿದರು.
ಫಲಿತಾಂಶ ಸರಕಾರದ ಜನಾದೇಶವಲ್ಲ: ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ಆಯಾ ಸ್ಥಳೀಯ ಪ್ರದೇಶದ ಜಾತಿ ರಾಜಕೀಯ, ಅಭ್ಯರ್ಥಿಗಳ ವೈಯಕ್ತಿಕ ನಿಲುವುಗಳ ಮೇಲೆ ಫಲಿತಾಂಶ ಆಧರಿಸಿರುತ್ತದೆ. ಹೀಗಾಗಿ ಯಾವ ಕಾರಣಕ್ಕೂ ಸರಕಾರದ ಜನಾದೇಶವಾಗಿರಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಿಸಿದರು.
ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಜನತೆ ನೀಡಿರುವ ಫಲಿತಾಂಶವನ್ನು ಸರಕಾರ ಗೌರವಿಸುತ್ತದೆ. ಜನತೆಯ ಅಭಿಪ್ರಾಯ ಹಾಗೂ ನಿರೀಕ್ಷೆಗಳು ಏನು ಎಂಬುದು ಗೊತ್ತಾಗಿದೆ. ಮುಂದಿನ 2018ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಮತ್ತಷ್ಟು ವಿಶ್ವಾಸವನ್ನು ಪಡೆದುಕೊಳ್ಳಲು ಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಒಟ್ಟು 11 ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಿದೆ. ಬಿಜೆಪಿಗೆ 8 ಹಾಗೂ ಜೆಡಿಎಸ್‌ಗೆ 2 ಸಿಕ್ಕಿದೆ. ಅತಂತ್ರಗೊಂಡಿರುವ ಜಿಲ್ಲೆಗಳಲ್ಲಿ ಪಕ್ಷೇತರ ಹಾಗೂ ಜಾತ್ಯತೀತ ಸಿದ್ಧಾಂತವುಳ್ಳ ಪಕ್ಷಗಳೊಂದಿಗೆ ಮಾತುಕತೆ ನಡೆಸಿ ಅಧಿಕಾರ ಹಿಡಿಯಲು ಪ್ರಯತ್ನಿಸಲಾಗುವುದು. ಇದನ್ನು ಪಕ್ಷದ ವರಿಷ್ಠರೊಂದಿಗೆ ಮಾತಾಡಿ ಸ್ಪಷ್ಟಪಡಿಸಲಾಗುವುದು ಎಂದು ತಿಳಿಸಿದರು. ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದೆ ಎಂದು ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ಆದರೆ, ಅಲ್ಲಿ ಕಾಂಗ್ರೆಸ್‌ಗೆ 3 ಹಾಗೂ ಬಿಜೆಪಿಗೆ 3 ಸ್ಥಾನಗಳು ಬಂದಿವೆ. ಹೀಗಾಗಿ ಇದು ಮುಖಭಂಗವಲ್ಲ. ಸ್ಪಲ್ಪ ಹಿನ್ನಡೆಯಾಗಿರಬಹುದೆಂದು ಅವರು ತಿಳಿಸಿದರು.
ಬಜೆಟ್ ನಂತರ ಸಂಪುಟ ಪುನರ್‌ರಚನೆ
ಚುನಾವಣೆ ಹಾಗೂ ಬಜೆಟ್ ನಂತರ ಸಚಿವ ಸಂಪುಟ ಪುನರ್ ರಚನೆ ಮಾಡಲಾಗುವುದು ಎಂದು ತಿಳಿಸಿದ್ದೆ. ಹೀಗಾಗಿ ಹೊಸಬರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಮುಂದಿನ ಬಜೆಟ್ ನಂತರ ಸಂಪುಟವನ್ನು ಪುನರ್‌ರಚನೆ ಮಾಡಲಾಗುವುದು. ಈಗಿನ ಫಲಿತಾಂಶಕ್ಕೂ ಸಂಪುಟ ಪುನರ್ ರಚನೆಗೂ ಯಾವುದೇ ಸಂಬಂಧ ಇಲ್ಲ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಜೆಡಿಎಸ್‌ಗೆ ಕಳೆದ ಬಾರಿಗಿಂತ ಶೇ.10ರಷ್ಟು ಹಿನ್ನಡೆ
ಬೆಂಗಳೂರು, ಫೆ.23: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಜೆಡಿಎಸ್‌ಗೆ ಕಳೆದ ಬಾರಿಗಿಂತ ಶೇ.10ರಷ್ಟು ಹಿನ್ನಡೆಯಾಗಿದ್ದರೂ 2018ರ ವಿಧಾನಸಭಾ ಚುನಾವಣಾ ವೇಳೆಗೆ ಒಂದು ಶಕ್ತಿಯಾಗಿ ಹೊರಹೊಮ್ಮುವ ಸೂಚನೆಯನ್ನು ನೀಡಿದೆ ಎಂದು ಜೆಡಿಎಸ್ ವಕ್ತಾರ ರಮೇಶ್‌ಬಾಬು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷವಾಗಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿಯನ್ನು ನೀಡಿದೆ. ಜೆಡಿಎಸ್ ಯಾವುದೇ ರಾಜಕೀಯ ಅಧಿಕಾರವನ್ನು ಹೊಂದಿಲ್ಲದೆ ಇರುವುದರಿಂದ ಅಭ್ಯರ್ಥಿಗಳಿಗೆ ಸಂಪನ್ಮೂಲಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದರಿಂದ ಚುನಾವಣಾ ಪ್ರಚಾರಕ್ಕೆ ತೊಂದರೆಯಾಯಿತು. ಹೀಗಾಗಿ ವ್ಯವಸ್ಥಿತವಾದ ಪ್ರಚಾರ ಇಲ್ಲದ ಕಾರಣ ಜೆಡಿಎಸ್ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ. ತುಮಕೂರು ಹಾಗೂ ಮೈಸೂರಿನಲ್ಲಿ ಜೆಡಿಎಸ್‌ಗೆ ಹೆಚ್ಚಿನ ಸ್ಥಾನಗಳು ಬರುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ನಮ್ಮ ಲೆಕ್ಕಾಚಾರ ತಪ್ಪಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.







