ಪ್ರವೇಶಕ್ಕೆ ನಿರ್ಬಂಧ ಹೇರುವ ದೇವಾಲಯಗಳನ್ನು ಬಹಿಷ್ಕರಿಸಿ: ನಿಡುಮಾಮಿಡಿ ಶ್ರೀ
ವೌಢ್ಯಾಚರಣೆ ವಿರುದ್ಧ ಜಾಗೃತಿ ವಿಚಾರಗೋಷ್ಠಿ

ಬೆಂಗಳೂರು, ಫೆ. 23: ಮಹಿಳೆಯರನ್ನು ಪ್ರವೇಶಿಸದಂತೆ ನಿರ್ಬಂಧಹೇರುವ ದೇವಾಲಯಗಳನ್ನು ಬಹಿಷ್ಕರಿಸಿ ಎಂದು ನಿಡುಮಾಮಿಡಿ ಮಹಾ ಸಂಸ್ಥಾನ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.
ಮಂಗಳವಾರ ನಗರದ ದೇವರಾಜ ಅರಸು ಭವನದಲ್ಲಿ ಡಿ.ದೇವರಾಜ ಅರಸು ಜನ್ಮಶತಮಾನೋತ್ಸವದ ಅಂಗವಾಗಿ ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಮಹಿಳೆಯರ ವೃತ್ತಿಯಲ್ಲಿ ಆಗುವಂತಹ ಅನಾನುಕೂಲಗಳು ಹಾಗೂ ವೌಢ್ಯಾಚರಣೆ ವಿರುದ್ಧ ಜಾಗೃತಿ ಕುರಿತ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ದೇವಾಲಯಗಳಿಗೆ ಮಹಿಳೆಯರ ಪ್ರವೇಶವನ್ನು ನಿರಾಕರಿಸುವಂತಹ ಅವಮಾನವೀಯ ಪದ್ಧತಿ ಇನ್ನೂ ಜೀವಂತವಾಗಿದೆ. ಮಹಿಳೆಯರು ಈ ಪದ್ಧತಿಯ ವಿರುದ್ಧ ಹೋರಾಟ, ಪ್ರತಿಭಟನೆ ಮಾಡುವ ಬದಲು ಸ್ವತಃ ಮಹಿಳೆಯರೆ ಈ ದೇವಾಲಯಗಳನ್ನು ಬಹಿಷ್ಕರಿಸಿ ಎಂದು ಅವರು ಕರೆ ನೀಡಿದರು.
ಹೆಣ್ಣು ಮುಟ್ಟಾಗುತ್ತಾಳೆ ಎಂಬ ಅವೈಜ್ಞಾನಿಕ ಅರಿವಿನಿಂದ ದೇವಾಲಯಗಳಿಗೆ ಮಹಿಳೆಯರು ಪ್ರವೇಶಿಸದಂತೆ ನಿರ್ಬಂಧ ಹೇರಲಾಗುತ್ತಿದೆ. ಸೃಷ್ಟಿಯಲ್ಲಿರುವ ಎಲ್ಲ ಜೀವ-ಜಂತುಗಳು, ದೇವ-ಸಂತರು ತಾಯಿ ಗರ್ಭದಿಂದಲೆ ಜೀವವನ್ನು ಪಡೆಯುತ್ತಾರೆ. ಮುಟ್ಟು ಇಲ್ಲದೆ ಮನುಷ್ಯನ ಹುಟ್ಟಿಲ್ಲ. ಈ ಹುಟ್ಟಿನ ಗುಟ್ಟನ್ನು ಅರಿತು ಹೆಣ್ಣು ಗಂಡೆಂಬ ಭೇದ ಭಾವವಿಲ್ಲದೆ ಸಹ ಜೀವನ ತತ್ವಗಳನ್ನು ಸ್ವೀಕರಿಸಿ ಸಹಬಾಳ್ವೆಯಿಂದ ಬಾಳಬೇಕೆಂದು ಹಾರೈಸಿದರು.
ಮಹಿಳೆಯರ ಏಳಿಗೆಗೆ ಮೀಸಲಾತಿ ಊರುಗೋಲು ಇದ್ದಂತೆ. ಆದರೆ ಕಳೆದ 20 ವರ್ಷದಿಂದ ಮಹಿಳೆಯರಿಗೆ ಮೀಸಲಿಟ್ಟಿರುವ ಶೇ.33 ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ಪುರುಷ ಪ್ರಧಾನ ಸಮಾಜ ನೀಡಲು ಒಪ್ಪುತ್ತಿಲ್ಲ. ಈ ಅಸಮಾನತೆಯ ಪುರುಷ ಸಮಾಜದ ತತ್ವಗಳ ವಿರುದ್ಧ ಮಹಿಳೆಯರು ಒಕ್ಕೊರಲಿನಿಂದ ಹೋರಾಟ ಮಾಡಬೇಕಿದೆ ಎಂದು ಉಲ್ಲೇಖಿಸಿದರು.
ಪುರುಷ ರೂಪಿತ ವೌಲ್ಯಗಳನ್ನು ಪ್ರಬಲವಾಗಿ ಪ್ರತಿರೋಧಿಸುವ ಗುಣಗಳನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು. ಭ್ರೂಣ ಹತ್ಯೆ ಮತ್ತು ವರದಕ್ಷಿಣೆಯ ವಿರುದ್ಧ ಜಾಗೃತರಾಗಬೇಕು ಎಂದು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವೆ ಡಾ.ಮಲ್ಲಿಕಾ ಘಂಟಿ ಮಾತನಾಡಿ, ಪುರುಷ ಪ್ರಧಾನ ಸಮಾಜದ ಆಲೋಚನೆಗಳನ್ನು ಒಪ್ಪಿಕೊಳ್ಳುವ ಕೆಲ ಮಹಿಳೆಯರು ಅಸಮಾನತೆಗೆ ಇನ್ನಷ್ಟು ಪುಷ್ಟಿ ನೀಡುತ್ತಿದ್ದಾರೆ. ಸಮಾಜ ಮಹಿಳೆಯರ ಬಗ್ಗೆ ಸಕಾರಾತ್ಮಕವಾಗಿ ಆಲೋಚನೆ ಮಾಡಿದಾಗ ಮಾತ್ರ ಮಹಿಳೆಯರು ಮುಂದೆ ಬರಲು ಸಾಧ್ಯ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ, ದೇಶದಲ್ಲಿ ಸ್ವಾತಂತ್ರ ಬಂದು 70 ವರ್ಷಗಳೇ ಕಳೆದರೂ ಇನ್ನೂ ಶೇ.67 ರಷ್ಟು ಮಹಿಳೆಯರು ಸೌಲಭ್ಯ ವಂಚಿತ, ಶೋಷಣೆ ಅಸಮಾನತೆಯಿಂದ ಜೀವನ ನಡೆಸುತ್ತಿದ್ದಾರೆ. ಮಹಿಳೆಯರ ಏಳ್ಗೆ ಮಹಿಳೆಯರಿಂದಲೆ ಸಾಧ್ಯ. ಹೀಗಾಗಿ ರಾಜ್ಯದಲ್ಲಿರುವ ಸ್ತ್ರೀ ಶಕ್ತಿ ಸಂಘಟನೆಗಳು ಹೋರಾಟ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜ್, ಪ್ರಗತಿಪರ ಚಿಂತಕರಾದ ಡಾ.ಪ್ರಮೀಳಾ ಮಾಧವ್, ಬಿ.ಟಿ.ಲಲಿತಾ ನಾಯಕ್, ಪ್ರಾಧ್ಯಾಪಕಿ ಡಾ.ಚಂದ್ರಮಾ ಎಸ್.ಕಣಗಲಿ, ಸಾಹಿತಿ ಡಾ.ವರದಾ ಶ್ರೀನಿವಾಸ್ ಉಪಸ್ಥಿತರಿದ್ದರು.





