ಭಾರತದ ಆರ್ಥಿಕತೆ ಸ್ಥಿರತೆಯ ಸ್ವರ್ಗ: ಪ್ರಣವ್

ಜನಧನ್ ಯೋಜನೆಯಲ್ಲಿ 21 ಕೋಟಿ ಖಾತೆ; 32 ಸಾವಿರ ಕೋಟಿ ರೂ. ಠೇವಣಿ ಸಂಗ್ರಹ
ರೈತರಿಗೆ ಅತ್ಯುತ್ತಮ ಬೆಲೆಗಾಗಿ ಇ-ವೇದಿಕೆ
ಹೊಸದಿಲ್ಲಿ, ಫೆ.23: ಹದಗೆಟ್ಟಿರುವ ಜಾಗತಿಕ ಆರ್ಥಿಕತೆಯಲ್ಲಿ ಭಾರತವನ್ನು ‘ಸ್ಥಿರತೆಯ ಸ್ವರ್ಗ’ ಎಂದು ಬಣ್ಣಿಸಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಸರಕಾರವು ಹೂಡಿಕೆಗಳ್ನು ಆಕರ್ಷಿಸಲು ಮಂಜೂರಾತಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಕಾಲಬಾಧಿತ ಕಾನೂನುಗಳನ್ನು ರದ್ದುಪಡಿಸಿದೆ ಹಾಗೂ ಪ್ರತಿಕೂಲವಲ್ಲದ ತೆರಿಗೆ ಆಡಳಿತವನ್ನು ಜಾರಿಗೆ ತಂದಿದೆ ಎಂದು ಇಂದಿಲ್ಲಿ ಹೇಳಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನದ ಆರಂಭದಲ್ಲಿ ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತವು ವಿಶ್ವಬ್ಯಾಂಕ್‌ನ ರ್ಯಾಂಕಿಂಗ್‌ನಲ್ಲಿ 12 ಸ್ಥಾನ ಮೇಲೇರಿದೆ ಹಾಗೂ ವಿದೇಶಿ ಬಂಡವಾಳದ ಹರಿವು ಶೇ.39ರಷ್ಟು ಹೆಚ್ಚಾಗಿದೆಯೆಂದು ನರೇಂದ್ರ ಮೋದಿ ಸರಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು.
ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕತೆ ಸ್ಥಿರವಾಗಿದೆ. ಜಿಡಿಪಿ ಬೆಳವಣಿಗೆ ಹೆಚ್ಚಾಗುವ ಮೂಲಕ ದೇಶವು ಬೃಹತ್ ಆರ್ಥಿಕತೆಗಳ ನಡುವೆ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನಿಸಿದೆಯೆಂದು ಮುಖರ್ಜಿ ತಿಳಿಸಿದರು.
ಜನಧನ್ ಯೋಜನೆಯು (ಪಿಎಂಜೆಡಿವೈ) ವಿಶ್ವದ ಅತ್ಯಂತ ಯಶಸ್ವಿ ಆರ್ಥಿಕ ಒಳಗೊಳಿಸುವಿಕೆ ಕಾರ್ಯಕ್ರಮವೆಂದು ಇಂದು ವ್ಯಾಖ್ಯಾನಿಸಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಈ ಯೋಜನೆಯಲ್ಲಿ 21 ಕೋಟಿಗೂ ಹೆಚ್ಚು ಖಾತೆಗಳಿಂದ ರೂ.32 ಸಾವಿರ ಕೋಟಿಗೂ ಹೆಚ್ಚು ವೌಲ್ಯದ ಠೇವಣಿಗಳನ್ನು ಸಂಗ್ರಹಿಸಲಾಗಿದೆಯೆಂದು ತಿಳಿಸಿದ್ದಾರೆ.
ಪಿಎಂಜೆಡಿವೈ ಕೇವಲ ಬ್ಯಾಂಕ್ ಖಾತೆಗಳನ್ನು ತರೆಯುವುದಕ್ಕಿಂತ ಬಹಳ ಆಚೆಗೆ ಹೋಗಿದ್ದು, ಬಡವರಿಗೆ ಮೂಲಭೂತ ಆರ್ಥಿಕ ಸೇವೆಗಳು ಹಾಗೂ ಭದ್ರತೆಯನ್ನು ಒದಗಿಸುವ ಮೂಲಕ ಬಡತನ ನಿವಾರಣೆಯ ಒಂದು ವೇದಿಕೆಯಾಗುತ್ತಿದೆ. ಇಂದು ಇದೊಂದು ವಿಶ್ವದಲ್ಲೇ ಅತ್ಯಂತ ಯಶಸ್ವಿ ಆರ್ಥಿಕ ಒಳಗೊಳಿಸುವಿಕೆ ಕಾರ್ಯಕ್ರಮವಾಗಿದೆಯೆಂದು ತಿಳಿಸಲು ಹೆಮ್ಮೆಪಡುತ್ತಿದ್ದೇನೆ. ತೆರೆಯಲಾದ 21 ಕೋಟಿ ಖಾತೆಗಳಲ್ಲಿ 15 ಕೋಟಿ ಖಾತೆಗಳು ವ್ಯವಹಾರ ನಿರತವಾಗಿದೆ. ಒಟ್ಟು ರೂ.32 ಸಾವಿರ ಕೋಟಿಗೂ ಹೆಚ್ಚು ಠೇವಣಿಗಳನ್ನು ಸಂಗ್ರಹಿಸಲಾಗಿದೆಯೆಂದು ಅವರು ಮಾಹಿತಿ ನೀಡಿದರು.
ರೈತರಿಗೆ ನ್ಯಾಯೋಚಿತ ಬೆಲೆಯನ್ನು ಖಚಿತಪಡಿಸಲು 585 ನಿಯಂತ್ರಿತ ಸಗಟು ಮಾರುಕಟ್ಟೆಗಳನ್ನು ಜೋಡಿಸುವ ರಾಷ್ಟ್ರೀಯ ಆನ್‌ಲೈನ್ ಕೃಷಿ ಮಾರುಕಟ್ಟೆ ವೇದಿಕೆಯನ್ನು ಭಾರತ ಸರಕಾರ ಸ್ಥಾಪಿಸಲಿದೆಯೆಂದು ಪ್ರಣವ್ ಮುಖರ್ಜಿ ತಿಳಿಸಿದ್ದಾರೆ.
ಉಪಗ್ರಹ ನಕ್ಷತ್ರ ಮಾಲಿಕೆ ಸ್ವದೇಶಿ ನಾವಿಕ ಹಾಗೂ ಸ್ಥಳಾಧಾರಿತ ಸೇವೆಗಳಿಗೆ ಅನುಕೂಲ ಕಲ್ಪಿಸಲು, 2016ರಲ್ಲಿ ಭಾರತೀಯ ನಾವಿಕ ಉಪಗ್ರಹಗಳ ನಕ್ಷತ್ರ ಮಾಲಿಕೆಯನ್ನು ಪೂರ್ಣಗೊಳಿಸುವುದಕ್ಕೆ ಸರಕಾರ ಗಮನ ನೀಡಲಿದೆಯೆಂದು ಮುಖರ್ಜಿ ತಿಳಿಸಿದರು.







