ಸೌದಿಅರೇಬಿಯಾ: ಗುಂಡು ಹಾರಾಟದಲ್ಲಿ ಭಾರತೀಯ ವ್ಯಕ್ತಿಯ ಹತ್ಯೆ

ಕತೀಫ್: ನಗರದ ಅವಾಮಿಯಾದಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ ವ್ಯಕ್ತಿಯೊಬ್ಬ ಮೃತನಾಗಿದ್ದಾನೆ. ಬನಾರಸ್ ನಿವಾಸಿ ಮನ್ಸೂರ್ ಮೃತನಾದ ವ್ಯಕ್ತಿಯೆಂದು ಪೊಲೀಸ್ ವಕ್ತಾರರು ದೃಢಪಡಿಸಿದ್ದಾರೆ. ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡುಹಾರಾಟ ನಡೆದಾಗ ಯುವಕ ತಾನು ವಾಸಿಸುತ್ತಿದ್ದ ಕೊಠಡಿಯ ಗೋಡೆಯಿಂದ ಒಳಗೆ ನುಸುಳಿ ಬಂದ ಗುಂಡು ಕುತ್ತಿಗೆಗೆ ತಾಗಿತ್ತು. ಕೇರಳದ ಪಾಲಕ್ಕಾಡ್ ನಿವಾಸಿ ಶಂಸುದ್ದೀನ್ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಅವರು ವಾಸಿಸುತ್ತಿದ್ದ ಕೋಣೆಯ ಗೋಡೆಯಲ್ಲಿ ಗುಂಡು ಸಿಡಿದಾಗ ಬಿರುಕು ಬಿದ್ದಿದ್ದು ಗೋಡೆಯ ಚೂರುಗಳು ಅವರ ಬೆನ್ನಿಗೆ ತಾಗಿ ಗಾಯಗೊಂಡಿದ್ದಾರೆ. ಕೋಣೆಯೊಳಗೆ ತೂರಿಬಂದ ಗುಂಡಿನಿಂದ ಸ್ವಲ್ಪದರಲ್ಲೇ ಶಂಸುದ್ದೀನ್ ಪಾರಾಗಿದ್ದರು. ಇದೇ ಕೋಣೆಯಲ್ಲಿದ್ದ ಕೊಲ್ಲಂನ ರಾಹುಲ್ ಎಂಬವರ ಕೈಗೂ ಗುಂಡೇಟಾಗಿದೆ. ಇವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹತ್ತು ದಿವಸಗಳ ಮೊದಲು ರಾಹುಲ್ ಹೌಸ್‌ಡ್ರೈವರ್ ವೀಸಾದಲ್ಲಿ ಇಲ್ಲಿಗೆ ಬಂದಿದ್ದರು. ಉತ್ತರಪ್ರದೇಶದ ಮುಹಮ್ಮದ್ ವಸೀಂ ಆರಿಫ್ ಎಂಬವರಿಗೂ ಗಾಯಗಳಾಗಿವೆ.
ಹಲವಾರು ಪ್ರಕರಣಗಳಲ್ಲಿ ಬೇಕಾದ ಭಯೋತ್ಪಾದಕ ಅಲಿಮುಹಮ್ಮದ್ ಅಲಿ ಅಬ್ದುಲ್ಲ ಅವಾಮಿಯಾದಲ್ಲಿ ಅಡಗಿದ್ದಾನೆಂದು ಮಾಹಿತಿಯ ಹಿನ್ನೆಲೆಯಲ್ಲಿ ಬಂದಿದ್ದ ಸೇನೆಯ ಕೈಯಿಂದ ಆತ ತಪ್ಪಿಸುವ ಶ್ರಮದಲ್ಲಿ ಗುಂಡುಹಾರಾಟ ನಡೆದಿತ್ತು. ಸೇನೆಯ ಆಕ್ರಮಣದಲ್ಲಿ ಅಲಿ ಕೊಲ್ಲಲ್ಪಟ್ಟಿದ್ದಾನೆ. ಆನಂತರ ಭಯೋತ್ಪಾದಕರು ಮತ್ತು ಸೇನೆಯ ನಡುವೆ ಗುಂಡಿನ ಹಾರಾಟ ನಡೆದಿತ್ತು. ಈ ಸಂದರ್ಭದಲ್ಲಿ ಉತ್ತರಪ್ರದೇಶದ ವ್ಯಕ್ತಿಯ ತಲೆಗೆ ಗುಂಡು ತಗಲಿತ್ತು. ಹೊರಗೆ ಗುಂಡುಹಾರಾಟ ನಡೆಯುತ್ತಿದ್ದರಿಂದ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸಾಧ್ಯವಾಗಿರಲಿಲ್ಲ. ಜೊತೆಗೆ ಹೊರಗಿಳಿಯಲು ಸಾಧ್ಯವಾಗಿರಲಿಲ್ಲ. ಘಟನೆ ನಡೆಯುವಾಗ ಇವರ ಸಹೋದರ ಹೊರಗಿದ್ದು ಕೋಣೆಯೊಳಗೆ ಬರಲು ಸಾಧ್ಯವಾಗಿರಲಿಲ್ಲ.ಬೆಳಗ್ಗೆ ಅಧಿಕಾರಿಗಳು ಬಂದ ಬಳಿಕ ಮೃತದೇಹವನ್ನು ಆಸ್ಪತ್ರೆಗೆ ತಲುಪಿಸಲಾಯಿತು. ಭಯೋತ್ಪಾದಕರು ರಸ್ತೆಯಲ್ಲಿ ಟಯರ್ ಉರಿಸಿ ರಾತ್ರಿಯಿಡೀ ಭಯದ ವಾತಾವರಣ ಸೃಷ್ಟಿಸಿದ್ದರು.







