ದನದ ಮೇವಿಗೆ ಬೆಂಕಿ ಬಿದ್ದು ಅಪಾರ ಹಾನಿ - ತಾ.ಪಂ. ಮಾಜಿ ಅಧ್ಯಕ್ಷರ ಸಹಿತ ಹಲವರ ಮೇಲೆ ಕೇಸು
ಬಿಜೆಪಿ ವಿಜಯೋತ್ಸವದ ವೇಳೆ ಬೆಂಕಿ ಅವಘಡ
ಸುಳ್ಯ: ಆಲೆಟ್ಟಿ ಗ್ರಾಮದ ಕುಡೆಕಲ್ಲು ಮೈಂದೂರು ಎಂಬಲ್ಲಿ ಕುಡೆಕಲ್ಲು ಮನ್ಮಥ ಎಂಬವರ ಮನೆಯ ಬಳಿ ಬೈಹುಲ್ಲು ರಾಶಿ ಬೆಂಕಿ ತಗುಲಿ ಸಂಪೂರ್ಣ ನಾಶವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ತಾ.ಪಂ. ಅಧ್ಯಕ್ಷ ಸೇರಿದಂತೆ ಹಲವು ಯುವಕರ ಮೇಲೆ ಕೇಸು ದಾಖಲಾದ ಘಟನೆ ನಡೆದಿದೆ.
ಬಿಜೆಪಿ ತಾ.ಪಂ. ಮತ್ತು ಜಿ.ಪಂ.ಗಳಲ್ಲಿ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಲವೆಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗುಂಪೊಂದು ಆಲೆಟ್ಟಿಯ ಮೈಂದೂರು ಕುಡೆಕಲ್ಲು ಮನ್ಮಥ ಎಂಬವರ ಮನೆಯ ಬಳಿ ಎರಡು ಜೀಪುಗಳಲ್ಲಿ ಬಂದು ಸೇರಿ ಬೊಬ್ಬಿಡುತ್ತಾ ಪಟಾಕಿ ಸಿಡಿಸಿ ಹರ್ಷಾಚರಣೆ ಮಾಡಿದ್ದರು. ಈ ಸಂದರ್ಭ ಸಿಡಿದ ಪಟಾಕಿಯ ಬೆಂಕಿಯ ಕಿಡಿ ಮನ್ಮಥರು ಲಾರಿಯಿಂದ ಇಳಿಸಿದ್ದ ಬೈಹುಲ್ಲು ರಾಶಿಗೆ ತಾಗಿ ಬೆಂಕಿ ಉರಿಯತೊಡಗಿತು. ಮನ್ಮಥರು ಓಡಿ ಬಂದು ಸಂಭ್ರಮಿಸುತ್ತಿದ್ದ ಗುಂಪಿನಲ್ಲಿದ್ದವರಲ್ಲಿ ಒಬ್ಬನನ್ನು ಹಿಡಿದು ಯಾರೆಲ್ಲ ಇದ್ದರು ಎಂಬ ಮಾಹಿತಿ ಪಡೆದು ಸುಳ್ಯ ಪೊಲೀಸ್ ಠಾಣೆಯಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ಸೇರಿದಂತೆ ಆರು ಮಂದಿಯ ಮೇಲೆ ದೂರು ದಾಖಲಿಸಿದ್ದಾರೆ.





