ಟ್ವೆಂಟಿ-20 ವಿಶ್ವಕಪ್: ಭಾರತಕ್ಕೆ ತೆರಳಲು ಪಾಕ್‌ಗೆ ಹಸಿರು ನಿಶಾನೆ

ಹೊಸದಿಲ್ಲಿ, ಫೆ.25: ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವನ್ನು ಕಳುಹಿಸಿಕೊಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಪಾಕ್ ಸರಕಾರ ಹಸಿರು ನಿಶಾನೆ ತೋರಿದೆ.
ಶಾಹಿದ್ ಅಫ್ರಿದಿ ಪಡೆಗೆ ಭಾರತದಲ್ಲಿ ಹೆಚ್ಚುವರಿ ಭದ್ರತೆಯನ್ನು ಕಲ್ಪಿಸುವಂತೆ ಐಸಿಸಿಗೆ ತಾನು ವಿನಂತಿಸಿದ್ದೇನೆ ಎಂದು ಪಿಸಿಬಿ ಚೇರ್‌ಮನ್ ಶಹರ್ಯಾರ್ ಖಾನ್ ಗುರುವಾರ ತಿಳಿಸಿದ್ದಾರೆ.
‘‘ನಮ್ಮ ತಂಡ ಭಾರತಕ್ಕೆ ಭೇಟಿ ನೀಡಲು ನಮ್ಮ ಸರಕಾರ ಅನುಮತಿ ನೀಡಿರುವುದಕ್ಕೆ ತನಗೆ ತುಂಬಾ ಸಂತೋಷವಾಗಿದೆ. ಭಾರತದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸುವಂತೆಯೂ ತಾನು ಐಸಿಸಿಯಲ್ಲಿ ಕೇಳಿಕೊಂಡಿದ್ದೇನೆ. ಕ್ರಿಕೆಟ್ ಅಭಿಮಾನಿಗಳಿಗೆ ಐಸಿಸಿ ವಿಶ್ವಕಪ್ ವೀಕ್ಷಿಸಲು ಭಾರತಕ್ಕೆ ತೆರಳಲು ವೀಸಾ ಸಹಿತ ಇತರ ವ್ಯವಸ್ಥೆಗಳನ್ನು ತಾವು ನಿರೀಕ್ಷಿಸುತ್ತಿರುವುದಾಗಿ’’ ಖಾನ್ ತಿಳಿಸಿದ್ದಾರೆ.
ಪಾಕಿಸ್ತಾನ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳುವ ಬಗ್ಗೆ ಪ್ರಧಾನ ಮಂತ್ರಿ ನವಾಝ್ ಶರೀಫ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಈ ಮೊದಲು ಖಾನ್ ಹೇಳಿಕೆ ನೀಡಿದ್ದರು.ಪಾಕ್ ತಂಡ ಮಾ.8 ರಿಂದ ಎ.3ರ ತನಕ ನಡೆಯಲಿರುವ ವಿಶ್ವಕಪ್‌ನಿಂದ ಹೊರಗುಳಿಯಲಿದೆ ಎಂಬ ಊಹಾಪೋಹ ಕೇಳಿಬಂದಿತ್ತು.
ಪಾಕ್ ತಂಡ ವಿಶ್ವಕಪ್‌ನಲ್ಲಿ ಭಾರತ, ಆಸ್ಟ್ರೇಲಿಯ, ನ್ಯೂಝಿಲೆಂಡ್ ಹಾಗೂ ಎ ಗುಂಪಿನ ವಿಜೇತ ತಂಡದೊಂದಿಗೆ ಗ್ರೂಪ್-2ರಲ್ಲಿ ಸ್ಥಾನ ಪಡೆದಿದೆ. ಮಾ.16 ರಂದು ಕೋಲ್ಕತಾದ ಈಡನ್‌ಗಾರ್ಡನ್‌ನಲ್ಲಿ ಅರ್ಹತಾ ತಂಡದ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಿದೆ. ಮಾ.19 ರಂದು ಧರ್ಮಶಾಲಾದಲ್ಲಿ ಭಾರತದ ವಿರುದ್ಧ ಆಡಲಿದೆ.







